ಮಂಜೇಶ್ವರ: ಇಲ್ಲಿನ ಕುಂಡುಕೊಳಕೆ ಸಮುದ್ರ ಕಿನಾರೆಯಲ್ಲಿ ಬುಧವಾರ ಸಂಜೆ ಅಲೆಗಳ ಅಬ್ಬರಕ್ಕೆ ಸಿಲುಕಿ ನಾಪತ್ತೆಯಾಗಿದ್ದ ಯುವಕನ ಮೃತದೇಹ ಇಂದು (ಗುರುವಾರ) ಸಂಜೆ ಹೊಸಬೆಟ್ಟು ಕಡಪ್ಪುರದಲ್ಲಿ ಪತ್ತೆಯಾಗಿದೆ.
ಮಂಜೇಶ್ವರ ಚೌಕಿ ನಿವಾಸಿಗಳಾದ ಉಮರುಲ್ ಫಾರೂಕ್ ಮತ್ತು ರಝೀನಾ ದಂಪತಿಗಳ ಪುತ್ರ ಮೊಹಮ್ಮದ್ ಝೈನುಲ್ ಹಾಬಿದ್ (18) ಬುಧವಾರ ಸಂಜೆ ತನ್ನ ಸ್ನೇಹಿತರೊಂದಿಗೆ ಕುಂಡುಕೊಳಕೆ ಬೀಚ್‌ಗೆ ವಿಹಾರಕ್ಕೆ ಬಂದಿದ್ದನು. ಈ ಸಂದರ್ಭದಲ್ಲಿ ಅಲೆಗಳ ಅಬ್ಬರಕ್ಕೆ ಸಿಲುಕಿ ಆತ ಸಮುದ್ರದಲ್ಲಿ ಕೊಚ್ಚಿ ಹೋಗಿದ್ದನು. ತಕ್ಷಣವೇ ಸ್ಥಳೀಯರು ಮತ್ತು ರಕ್ಷಣಾ ತಂಡಗಳು ಹುಡುಕಾಟ ನಡೆಸಿದರೂ ಬುಧವಾರ ಯಾವುದೇ ಸುಳಿವು ಲಭ್ಯವಾಗಿರಲಿಲ್ಲ.
ಗುರುವಾರ ಬೆಳಗ್ಗಿನಿಂದಲೇ ಶೋಧ ಕಾರ್ಯ ಬಿರುಸಿನಿಂದ ಸಾಗಿತ್ತು. ಇಂದು ಸಂಜೆ ವೇಳೆಗೆ ಘಟನಾ ಸ್ಥಳದಿಂದ ಸ್ವಲ್ಪ ದೂರದ ಹೊಸಬೆಟ್ಟು ಕಡಪ್ಪುರದಲ್ಲಿ ಯುವಕನ ಮೃತದೇಹ ದಡಕ್ಕೆ ಬಂದು ಬಿದ್ದಿರುವುದು ಕಂಡುಬಂದಿದೆ. ಮಗನನ್ನು ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದ್ದು, ಚೌಕಿ ಪರಿಸರದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.
ಕುಂಡುಕೊಳಕೆ ಬೀಚ್‌ನಲ್ಲಿ ಪದೇ ಪದೇ ಇಂತಹ ಅನಾಹುತಗಳು ಸಂಭವಿಸುತ್ತಿದ್ದರೂ, ಇಲ್ಲಿ ಸರಿಯಾದ ಸುರಕ್ಷತಾ ವ್ಯವಸ್ಥೆಗಳಿಲ್ಲದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಲೈಫ್ ಗಾರ್ಡ್‌ಗಳ ಕೊರತೆ ಮತ್ತು ಎಚ್ಚರಿಕೆ ಫಲಕಗಳಿಲ್ಲದ ಕಾರಣ ಇಂತಹ ಅಮಾಯಕ ಜೀವಗಳು ಬಲಿಯಾಗುತ್ತಿವೆ ಎಂದು ಪ್ರವಾಸಿಗರು ದೂರಿದ್ದಾರೆ.