ಕುಂಬಳೆಯಲ್ಲಿ ಹೋಟೆಲ್ ಎದುರು ನಿಲ್ಲಿಸಿದ್ದ ಬೈಕ್ ಕಳವು ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಬ್ರಾಣದ ನಿವಾಸಿ ರವಿ ಅಲಿಯಾಸ್ ‘ಡಬ್ಬ ರವಿ’ ಬಂಧಿತ ಆರೋಪಿ. ಘಟನೆಯ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಹುಡುಕುತ್ತಿದ್ದರು. ಇದೇ ವೇಳೆ ಅಪಘಾತದಲ್ಲಿ ಗಾಯಗೊಂಡ ರವಿಯನ್ನು ಕುಂಬಳೆ ಸರಕಾರಿ ಆಸ್ಪತ್ರೆಗೆ ತರಲಾಗುತ್ತಿದೆ ಎಂಬ ಮಾಹಿತಿ ಪೊಲೀಸರಿಗೆ ದೊರಕಿತು. ತಕ್ಷಣ ಆಸ್ಪತ್ರೆಯಲ್ಲಿ ಕಾದಿದ್ದ ಪೊಲೀಸರು, ಅಲ್ಲಿಗೆ ಬಂದ ಆರೋಪಿಯನ್ನು ಬಂಧಿಸಿದರು.
ನಂತರ ಆರೋಪಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಲ್ಲಿನ ಪೊಲೀಸ್ ಸೆಲ್ನಲ್ಲಿ ಕಾವಲಿನಡಿ ಚಿಕಿತ್ಸೆ ಮುಂದುವರಿದಿದೆ. ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಆರೋಪಿಯನ್ನು ವಿಚಾರಣೆ ನಡೆಸಲಾಗುವುದು ಹಾಗೂ ಕಳವಾದ ಬೈಕ್ ಪತ್ತೆಹಚ್ಚಲಾಗುವುದು ಎಂದು ಎಸ್ಐ ಅನಂತಕೃಷ್ಣನ್ ಆರ್ ಮೆನನ್ ತಿಳಿಸಿದ್ದಾರೆ. ಕಂಚಿಕ್ಕಟ್ಟೆಯ ಅಜಿತ್ ಕುಮಾರ್ ಅವರ ಪಲ್ಸರ್ ಬೈಕ್ ಕಳವು ಮಾಡಲಾಗಿದ್ದು, ಕಳವಾದ ಬೈಕ್ನಲ್ಲಿ ರವಿ ಸಂಚರಿಸುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಪೊಲೀಸರಿಗೆ ಲಭ್ಯವಾಗಿವೆ.