ಮಂಜೇಶ್ವರ ಬೀಚ್‌ನಲ್ಲಿ ಕಸದ ಪರ್ವತ: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಮೀನುಗಾರರು–ಪ್ರವಾಸಿಗರ ಆಕ್ರೋಶ

ಮಂಜೇಶ್ವರ: ಪ್ರವಾಸಿ ಆಕರ್ಷಣೆಯಾಗಿ ಹೆಸರು ಮಾಡಿರುವ ಮಂಜೇಶ್ವರ ಬೀಚ್ ಇದೀಗ ಕಸದ ಗುಡ್ಡಗಳ ಕೇಂದ್ರವಾಗುತ್ತಿದೆ. ಬೀಚ್ ಸಮೀಪದ ಎಲ್ಲ ಪ್ರದೇಶಗಳು ಈಗ ಪ್ಲಾಸ್ಟಿಕ್ ಸೇರಿದಂತೆ ವಿವಿಧ ತ್ಯಾಜ್ಯಗಳಿಂದ ತುಂಬಿ ಹರಿಯುತ್ತಿವೆ.

ಪ್ರತಿದಿನ ನೂರಾರು ಜನರು ಭೇಟಿ ನೀಡುವ ಈ ಪ್ರದೇಶದಲ್ಲಿ ಮಲಿನತೆ ಹೆಚ್ಚುತ್ತಿರುವುದು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಬೀಚ್‌ಗೆ ಬರುವ ಪ್ರವಾಸಿಗರು ಮತ್ತು ಹತ್ತಿರದ ವಾಟರ್ ಥೀಮ್ ಪಾರ್ಕ್‌ಗೆ ಆಗಮಿಸುವವರು ಆಹಾರದ ಅವಶೇಷಗಳು ಹಾಗೂ ಪ್ಲಾಸ್ಟಿಕ್ ಕವರ್‌ಗಳನ್ನು ಎಸೆಯುತ್ತಿರುವುದು ಸಾಮಾನ್ಯವಾಗಿದೆ.

ಕಸದ ರಾಶಿ ಹೆಚ್ಚಾಗುತ್ತಿದ್ದಂತೆ ಬೀದಿ ನಾಯಿಗಳ ಕಾಟವೂ ತೀವ್ರವಾಗಿದೆ. ಇದರಿಂದ ಬೀಚ್‌ಗೆ ಬರುವ ಮಕ್ಕಳಿಗೂ ಹಿರಿಯರಿಗೂ ಅಪಾಯ ಎದುರಾಗುತ್ತಿದೆ.

ಸ್ಥಳೀಯರು ಆರೋಪಿಸುವಂತೆ, ಸಮಸ್ಯೆ ಗಂಭೀರವಾಗಿದ್ದರೂ ಪಂಚಾಯತ್ ಹಾಗೂ ಆರೋಗ್ಯ ಇಲಾಖೆ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ. “ಬೋಟುಗಳಿಗಾಗಿ ಮಾಡಿದ್ದ ಸ್ಥಳಗಳು ಈಗ ಕಸದ ಡಬ್ಬಿಗಳಾಗಿ ಮಾರ್ಪಟ್ಟಿವೆ. ದುರ್ವಾಸನೆ ಕಾರಣದಿಂದ ಕೆಲಸ ಮಾಡಲೂ ಕಷ್ಟವಾಗಿದೆ,” ಎಂದು ಮೀನುಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸ್ಥಳೀಯರು ಮತ್ತು ಮೀನುಗಾರರು ತ್ಯಾಜ್ಯ ಎಸೆಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ವೈಜ್ಞಾನಿಕ ತ್ಯಾಜ್ಯ ನಿರ್ವಹಣಾ ವ್ಯವಸ್ಥೆ ಜಾರಿಗೆ ತರಬೇಕು ಎಂದು ಆಗ್ರಹಿಸಿದ್ದಾರೆ. ಬೀಚ್‌ನ ಸ್ವಾಭಾವಿಕ ಸೌಂದರ್ಯ ಉಳಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!