ಕಾಸರಗೋಡು: ಕೀಳೂರು ಪ್ರದೇಶದಲ್ಲಿ ಗುಂಡಾಸಂಘದ ದಾಳಿ ನಡೆದಿದ್ದು, ಪ್ರವಾಸಿ ಯುವಕನಿಗೆ ಚಾಕುವಿನಿಂದ ಇರಿದು ಗಂಭೀರವಾಗಿ ಗಾಯಗೊಳಿಸಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಕೀಳೂರಿನ ಮಹಮ್ಮದ್ ಕುಂಜಿ ಅವರ ಪುತ್ರ ಹಾಗೂ ಗಲ್ಫ್ ದೇಶದಲ್ಲಿ ಉದ್ಯೋಗದಲ್ಲಿರುವ ಮಿಗ್ದಾದ್ (32) ಗಾಯಗೊಂಡ ವ್ಯಕ್ತಿ. ಅವರನ್ನು ಕಾಸರಗೋಡು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಗಾಯಾಳು ಮಿಗ್ದಾದ್ ನೀಡಿದ ಮಾಹಿತಿ ಪ್ರಕಾರ,ಕಾಞ್ಞಂಗಾಡಿನಲ್ಲಿ ಆಟ ವೀಕ್ಷಿಸಿ ತಮ್ಮ ಸಹೋದರ, ಇಬ್ಬರು ಚಿಕ್ಕ ಮಕ್ಕಳು ಮತ್ತು ಸ್ನೇಹಿತರೊಂದಿಗೆ ರಾತ್ರಿ ಸುಮಾರು 11 ಗಂಟೆಗೆ ಕಾರಿನಲ್ಲಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಈ ದಾಳಿ ನಡೆದಿದೆ.
ಮೂರು ಮಂದಿ ದಾಳಿಕೋರರು ಮಾರಕಾಯುಧಗಳೊಂದಿಗೆ ಕೀಳೂರು ಟೌನ್ನಲ್ಲಿ ಅಂಗಡಿಗಳು ಮತ್ತು ಒಂದು ಕ್ಲಬ್ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಿದ್ದು, ಒಂದು ಬೈಕ್ಗೂ ಹಾನಿ ಮಾಡಿದ್ದಾರೆ. ಬಳಿಕ ರಸ್ತೆ ತಡೆದು ಸಾರ್ವಜನಿಕರ ವಿರುದ್ಧ ಅಸಭ್ಯವಾಗಿ ವರ್ತಿಸಿದ್ದಾರೆ.
ಇದನ್ನು ಪ್ರಶ್ನಿಸಲು ಮುಂದಾದ ಮಿಗ್ದಾದ್ ಮೇಲೆ ಆರೋಪಿಗಳು ಚಾಕುವಿನಿಂದ ಕೈ ಹಾಗೂ ಬೆನ್ನಿನ ಭಾಗಕ್ಕೆ ಇರಿದು, ಮೂಗಿನ ಭಾಗಕ್ಕೂ ಹೊಡೆದಿದ್ದಾರೆ ಎಂದು ಹೇಳಲಾಗಿದೆ.
ಗದ್ದಲದ ಶಬ್ದ ಕೇಳಿ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಗಂಭೀರವಾಗಿ ಗಾಯಗೊಂಡ ಮಿಗ್ದಾದ್ ಅವರನ್ನು ತಕ್ಷಣ ಕಾಸರಗೋಡು ಆಸ್ಪತ್ರೆಗೆ ದಾಖಲಿಸಿದರು.
ಈ ದಾಳಿಯನ್ನು ಇಸ್ಮಾಯಿಲ್ (ಇಚ್ಚುಲು), ಸುಹೈಲ್ ಮತ್ತು ಸಾದಿಕ್ ನಡೆಸಿದ್ದಾರೆ ಎಂದು ಮಿಗ್ದಾದ್ ಮೇಲಪ್ಪರಂಬ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ಈ ಕುರಿತು ಹೇಳಿಕೆ ದಾಖಲಿಸಿಕೊಂಡಿರುವ ಪೊಲೀಸರು ಶೀಘ್ರದಲ್ಲೇ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದ್ದಾರೆ. ಘಟನೆ ಕುರಿತು ತನಿಖೆ ಮುಂದುವರಿದಿದೆ.