ಮಂಜೇಶ್ವರ: ರಾಷ್ಟ್ರೀಯ ಹೆದ್ದಾರಿಯ ಮಳೆ ನೀರು ಸುಗಮವಾಗಿ ಹರಿದು ಹೋಗಲೆಂದು ನಿರ್ಮಿಸಲಾದ ಉದ್ಯಾವರ ಮಾಡ ಪರಿಸರದ ವಾಟರ್ ಚಾನಲ್ (ರಾಜಕಾಲುವೆ), ಇದೀಗ ಕಿಡಿಗೇಡಿಗಳ ಅಕ್ಷಮ್ಯ ವರ್ತನೆಯಿಂದಾಗಿ ‘ಸಾಂಕ್ರಾಮಿಕ ರೋಗಗಳ ತವರು’ ಆಗಿ ಮಾರ್ಪಟ್ಟಿದೆ.
ಹೆದ್ದಾರಿಯಿಂದ ಹರಿದು ಬರುವ ನೀರು ಕುಂಡುಕೊಳಕೆ ಹಾಗೂ ಅಂಜರೆ ಮಾರ್ಗವಾಗಿ ಸಮುದ್ರವನ್ನು ಸೇರಬೇಕಿತ್ತು. ಆದರೆ, ಪ್ರಸ್ತುತ ಈ ಕಾಲುವೆಯು ಪ್ಲಾಸ್ಟಿಕ್ ಲೋಟ-ಚೀಲಗಳು, ಹಸಿ ಕಸ ಹಾಗೂ ಹಾದಿಹೋಕರು ಎಸೆಯುವ ಕೋಳಿ ತ್ಯಾಜ್ಯದಿಂದ ತುಂಬಿ ತುಳುಕುತ್ತಿದೆ. ಕಾಲುವೆಯಲ್ಲಿ ನೀರು ಹರಿಯುವ ಬದಲು ಕೊಳೆತ ತ್ಯಾಜ್ಯಗಳು ಶೇಖರಣೆಗೊಂಡು ಇಡೀ ಪರಿಸರವೇ ನಾರುತ್ತಿದೆ. ಇಲ್ಲಿನ ದುರ್ವಾಸನೆ ಎಷ್ಟೊಂದು ಭೀಕರವಾಗಿದೆಯೆಂದರೆ, ಸಾರ್ವಜನಿಕರು ಮೂಗು ಮುಚ್ಚಿಕೊಂಡೇ ಓಡಾಡಬೇಕಾದ ನರಕಸದೃಶ ಸ್ಥಿತಿ ನಿರ್ಮಾಣವಾಗಿದೆ.
ಈ ಕಲುಷಿತ ವಾತಾವರಣದಿಂದಾಗಿ ಸುತ್ತಮುತ್ತಲಿನ ನಿವಾಸಿಗಳಿಗೆ ಡೆಂಗ್ಯೂ, ಮಲೇರಿಯಾದಂತಹ ಭೀಕರ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ಜನರ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿರುವ ಈ ಪರಿಸ್ಥಿತಿಯನ್ನು ಕಂಡು ಸ್ಥಳೀಯರು ಕೆಂಡಾಮಂಡಲವಾಗಿದ್ದಾರೆ. “ಅಭಿವೃದ್ಧಿಯ ಹೆಸರಲ್ಲಿ ನಿರ್ಮಿಸಿದ ಚಾನಲ್‌ಗಳು ಇಂದು ಕಸದ ತೊಟ್ಟಿಗಳಾಗುತ್ತಿರುವುದು ಆಡಳಿತ ವ್ಯವಸ್ಥೆಯ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ” ಎಂದು ಸಾರ್ವಜನಿಕರು ಕಿಡಿಕಾರುತ್ತಿದ್ದಾರೆ.
ರಾತ್ರಿ ಸಂಚರಿಸುವ ವಾಹನಗಳಿಂದ ಹಾಗೂ ಸ್ಥಳೀಯವಾಗಿ ಕಸ ಎಸೆಯುವ ಕಿಡಿಗೇಡಿಗಳನ್ನು ಪತ್ತೆಹಚ್ಚಲು ಕೂಡಲೇ ಈ ಭಾಗದಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಬೇಕು. ಪರಿಸರವನ್ನು ಮಲೀನಗೊಳಿಸುವ ಅಂತಹ ವಿಕೃತ ಮನಸ್ಸಿನ ವ್ಯಕ್ತಿಗಳ ವಿರುದ್ಧ ಸಂಬಂಧಪಟ್ಟ ಇಲಾಖೆಗಳು ಕ್ರಿಮಿನಲ್ ಪ್ರಕರಣ ದಾಖಲಿಸಿ, ಕಠಿಣ ದಂಡ ವಿಧಿಸಬೇಕು. ಕಾಲುವೆಯಲ್ಲಿ ಹೂತುಹೋಗಿರುವ ತ್ಯಾಜ್ಯವನ್ನು ಕೂಡಲೇ ತೆರವುಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡಬೇಕು.
ಸಂಬಂಧಪಟ್ಟ ಪಂಚಾಯತ್ ಆಡಳಿತ ಮತ್ತು ಆರೋಗ್ಯ ಇಲಾಖೆ ಇನ್ನಾದರೂ ಎಚ್ಚೆತ್ತುಕೊಂಡು ಈ ‘ಗಬ್ಬು ನಾರುತ್ತಿರುವ’ ಸಮಸ್ಯೆಗೆ ಶಾಶ್ವತ ಪರಿಹಾರ ನೀಡದಿದ್ದರೆ, ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಸ್ಥಳೀಯರು ಎಚ್ಚರಿಕೆಯ ಕರೆಗಂಟೆ ಬಾರಿಸಿದ್ದಾರೆ.