ನಾನು ಇವತ್ತು ಹಲವು ತಿಂಗಳುಗಳ ನಂತರ ಹಾಸ್ಟೆಲ್ ನಿಂದ ಮನೆಗೆ ಹೊರಟಿದ್ದೆ. ಹಾಸ್ಟೆಲಿಗೆ ಸೇರಿದ ಹೊಸತರಲ್ಲಿ ಮನೆ ಜಾಸ್ತಿ ನೆನಪಾಗುತ್ತಿತ್ತು. ಈಗ ಮೂರು ವರ್ಷಗಳ ನಂತರ ಅದುವೇ ನನ್ನ ಮನೆಯಾಗಿದೆ . ಮನೆಯ ತರಹದ ಪ್ರೀತಿ ಹಾಸ್ಟೆಲ್ ನಲ್ಲಿ ಸಿಗುತ್ತಿದೆ.ಗೆಳತಿಯರೆಲ್ಲರೂ ಆ ಮನೆಯ ಸದಸ್ಯರಾಗಿದ್ದಾರೆ. ಮನೆಗೆ ಹೋಗಿ ಸುಮಾರು ಐದು ತಿಂಗಳಾಗಿರಬಹುದು. ಅಂತೂ ಈಗ ಪರೀಕ್ಷೆ ಮುಗಿಸಿ ಕೆಲವು ದಿನಗಳ ರಜೆಗೆ ಮನೆಗೆ ಹೊರಟಿದ್ದೇನೆ.
ನನ್ನ ಬಸ್ಸು ಬೆಳಿಗ್ಗೆ 9:00 ಗಂಟೆಗೆ ಹೊರಡುವುದಿತ್ತು , ಹಾಗಾಗಿ ಕಾಲು ಗಂಟೆ ಮುಂಚಿತವಾಗಿ ನಾನು ಲಗೇಜುಗಳೊಂದಿಗೆ ಬಸ್ ಸ್ಟ್ಯಾಂಡಿಗೆ ಬಂದಿದ್ದೆ. ನನ್ನ ಸೀಟ್ ನಂಬರು ಹುಡುಕಿ ಕುಳಿತುಕೊಂಡೆ. 4 ರಿಂದ 4:30 ಗಂಟೆ ನಮ್ಮ ಊರಿಗೆ ತಲುಪಲು ಬೇಕಾಗಿತ್ತು, ಒಂದು ಒಂದೂವರೆ ಅಷ್ಟೊತ್ತಿಗೆ ನಾನು ಊರಿಗೆ ತಲುಪ ಬಹುದು ಅಂದುಕೊಳ್ಳುತ್ತಿದ್ದೆ. ಎಂದೆಲ್ಲಾ ಯೋಚನೆ ಮಾಡುತ್ತಿರುವಾಗಲೇ ಹತ್ತಿರದ ಸೀಟಿನವರು ಬಂದರು. “ನೀನು ಎಲ್ಲಿಗೆ ಹೋಗಬೇಕಮ್ಮಾ” ಎಂದು ಪ್ರಶ್ನಿಸಿದರು.
“ಮಂಗಳೂರಿಗೆ” ಎನ್ನುತ್ತಾ “ನೀವು ಎಲ್ಲಿಗೆ ಹೋಗುತ್ತಿರುವಿರಿ” ಎಂದು ಪ್ರಶ್ನಿಸಿದೆ ನಾನು.
“ ನಾನು ಸುರತ್ಕಲ್ಲಿಗೆ ಹೋಗಬೇಕು, ಅಲ್ಲಿ ನನ್ನ ಮಗಳಿದ್ದಾಳೆ, ಅವಳ ಮನೆಗೆ ಹೋಗಬೇಕಾಗಿದೆ, ನೀನು ರಜೆಗೆ ಮಂಗಳೂರಿಗೆ ಹೋಗುತ್ತಿರುವೆಯೇನು?” ಕೇಳಿದರು.
“ಹೌದು ಕೆಲವು ತಿಂಗಳುಗಳ ನಂತರ ನಾನು ಮನೆಗೆ ಹೋಗುತ್ತಿದ್ದೇನೆ” ಎನ್ನುತ್ತಿರುವಾಗಲೇ ನನ್ನ ಮುಖದಲ್ಲಿ ಮನೆಯ ಪ್ರೀತಿ, ಅನುಕಂಪದ ಛಾಯೆ ಇತ್ತು.
ಅದನ್ನು ಗುರುತಿಸಿದ ಅವರು “ಬಹಳ ಸಂತೋಷದಲ್ಲಿ ಇದ್ದೀಯ, ಇಲ್ಲಿ ಮೈಸೂರಲ್ಲಿ ಏನು ಮಾಡುತ್ತಿದ್ದಿ, ಏನು ನಿನ್ನ ಹೆಸರು?” ಕೇಳಿದರು
“ನಾನು ರಮ್ಯ, ಜೆಸಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓಡುತ್ತಿದ್ದೇನೆ” ಎಂದೆ.
ಹೀಗೆ ಹಾಸ್ಟೆಲ್ನ ಕೆಲವೊಂದು ಸುದ್ದಿಗಳು ಹಾಗೂ ಮೈಸೂರು, ಮಂಗಳೂರಿನ ಕೆಲವು ವಿಷಯಗಳ ಬಗ್ಗೆ ಮಾತನಾಡಿದೆವು. ಹೀಗೆ ಮಾತನಾಡುತ್ತಾ ಅವರು ಅಲ್ಲಿ ಸೀಟಿನಲ್ಲಿ ನಿದ್ದೆಗೆ ಜಾರಿದರು. ಬಸ್ಸು ಈಗ ಸುಮಾರು 8- 10 ಕಿಲೋಮೀಟರ್ ಬಂದಿರಬಹುದು. ನನಗೆ ನಿದ್ದೆ ಬರುತ್ತಿರಲಿಲ್ಲ, ಮನೆಗೆ ಹೋಗುವ ಖುಷಿಯಲ್ಲಿ ಅಲ್ಲಿಯದೇ ಯೋಚನೆ. ನಮ್ಮದೊಂದು ಪುಟ್ಟ ಮನೆ, ಅಜ್ಜ,, ಅಪ್ಪ, ಅಮ್ಮ,ನಾನು ಮತ್ತು ತಂಗಿ ರಕ್ಷಾ ಇಷ್ಟು ಜನ ಇರುವಂತ ಪುಟ್ಟ ಸಂಸಾರ. ಆದರೆ ಈಗ ಎರಡು ವರ್ಷದ ಹಿಂದೆ ನಮ್ಮ ಅಜ್ಜಿ ತೀರಿಕೊಂಡಿದ್ದರು. ಇನ್ನು ಪ್ರೀತಿಸಿ ಮುದ್ದಿಸುವ ಅಮ್ಮ, ಸಾಂಪ್ರದಾಯಿಕ ಅಡುಗೆಯಿಂದ ಹಿಡಿದು ಹೊಸ ಶೈಲಿಯ ಅಡುಗೆಯನ್ನು ಮಾಡಿ ಕೊಡುತ್ತಿದ್ದಳು. ನಮ್ಮ ಯಾವುದೇ ಸಮಸ್ಯೆ ಇರಲಿ ಅದು ನಮಗಿಂತ ಮೊದಲು ಅವಳಿಗೆ ತಿಳಿಯುತ್ತಿತ್ತು. ಜಾದುನಂತೆ ಎಲ್ಲಾ ಸಮಸ್ಯೆಗೆ ಪರಿಹಾರ ಅವಳಲ್ಲಿತ್ತು . ಚಿಕ್ಕದೊಂದು ತೋಟದ ಜೊತೆಗೆ ಪೋಸ್ಟ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಅಪ್ಪ, ನಮ್ಮ ಎಲ್ಲಾ ಬೇಕು ಬೇಡಗಳನ್ನು ನಿಭಾಯಿಸುತ್ತಿದ್ದರು.
ಮನೆಯ ಆ ಚಿಕ್ಕ ಜಗಲಿಯಲ್ಲಿ ಕುಂಟೆಬಿಲ್ಲೆ, ಕಲ್ಲಾಟ, ಕಣ್ಣ ಮುಚ್ಚಾಲೆ ಅಂತಹ ಹಲವಾರು ಆಟಗಳನ್ನು ನಾನು ಮತ್ತು ರಕ್ಷಾ ಆಡುತ್ತಿದ್ದೆವು. ಆಟ ಏನು?! ಆಟಕಿಂತ ಜಗಳ ಆಡಿದ್ದೇ ಹೆಚ್ಚಿರಬಹುದು. ಅಕ್ಕ ತಂಗಿ ಎಂದರೆ ಹಾಗೆ ಅಲ್ಲವೇ? ಬಾಲ್ಯದಲ್ಲಿ ಮಾತು ಮಾತಿಗೆ ಜಗಳ ಆಡುವುದು, ಅದು ಯಾವಾಗ ಮಮತೆಯಾಗಿ ಬದಲಾಯಿತು ಎಂದು ಗೊತ್ತೇ ಆಗಲಿಲ್ಲ. ಇಂತಹ ಪ್ರೀತಿಯ ಮಹಾಪೂರದಲ್ಲಿ ಬೆಳೆದಂತಹ ನಾನು ಹಾಸ್ಟೆಲಿನಲ್ಲಿ ಕಳೆದ ಆರಂಭಿಕ ದಿನಗಳಲ್ಲಿ ನನ್ನ ಕಣ್ಣಂಚಿನಲ್ಲಿ ಹರಿದ ಜಾಲಾಧರೆಗೆ ಪರಿಮಾಣವೇ ಇರಲಿಲ್ಲ !!.
ಎಲ್ಲರನ್ನು ಬೆರಗುಗೊಳಿಸಬೇಕೆಂದು ರಿಕ್ಷಾ ಹಿಡಿದು ಮನೆಯವರಿಗೆ ನಾನು ಬರುವ ವಿಷಯವನ್ನು ತಿಳಿಸದೆ ಮನೆಯ ಬಾಗಿಲಿಗೆ ಬಂದಿಳಿದೆ.ಎಲ್ಲರೂ ಅಚ್ಚರಿಯಿಂದ ಸ್ವಾಗತಿಸುವರೆಂದುಕೊಂಡ ನನಗೆ ಬೆಚ್ಚಿ ಬೀಳಿಸುವ ಸಂಗತಿ ಅಲ್ಲಿ ಕಾದಿತ್ತು. ಅಮ್ಮ ಎದೆಗೆ ಕೈ ಹಿಡಿಯುತ್ತಾ,ಉಸಿರಾಡಲು ಕಷ್ಟ ಪಡುತ್ತಾ ಇದ್ದರು. ರಕ್ಷಾ ಗೆ ಏನು ಮಾಡುವುದೆಂದು ತೋಚದೆ, ಅಳುತ್ತಾ ಅಮ್ಮನ ಕೈ ಉಜ್ಜುತ್ತಿದ್ದಳು. ಅಪ್ಪ ಕೆಲಸಕ್ಕೆ ಎಂದು ಹೊರಗಡೆ ಹೋಗಿದ್ದರು, ಮನೆಯಲ್ಲಿ ಬೇರೆ ಯಾರು ಇರಲಿಲ್ಲ. “ಅಯ್ಯೋ ಏನಾಯ್ತಮ್ಮ” ಎಂದು ಕಿರುಚುತ್ತಾ ಬ್ಯಾಗ್ ಗಳನ್ನು ಎಸೆಯುತ್ತಾ ಓಡಿ ಬಂದೆ. ಮನೆ ಇಡೀ ಚೆನ್ನಾಗಿ ಓಡಾಡುತ್ತಿದ್ದ ಅಮ್ಮನಿಗೆ ಏನಾಯಿತು ಎಂದು ತೋಚಲಿಲ್ಲ. ನಾನು ಬಂದ ರಿಕ್ಷಾದವನು ಇನ್ನೂ ಹೊರಟಿರಲಿಲ್ಲ, ಅವನನ್ನು ಕೂಗಿ ಕರೆದೆ, ನಾನು ಮತ್ತು ರಕ್ಷಾ ಹೇಗಾದರೂ ಮಾಡಿ ಅಮ್ಮನನ್ನು ರಿಕ್ಷಾದಲ್ಲಿ ಕೂಡಿರಿಸಲು ಪ್ರಯತ್ನಿಸಿದೆವು, ನಮ್ಮಿಬ್ಬರಿoದ ಅದು ಸಾಧ್ಯವಾಗಲಿಲ್ಲ. ರಿಕ್ಷಾದವನ ಸಹಾಯ ಬೇಡಿದೆವು. ಅವನು ಹಿಡಕೊಂಡ, ಮೂವರು ಸೇರಿ ಹೇಗಾದರೂ ರಿಕ್ಷಾದಲ್ಲಿ ಕೂಡಿಸಿದೆವು. ರಿಕ್ಷಾದವನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಹೇಳಿದೆ. ಅಮ್ಮಇನ್ನೂ ಜೋರಾಗಿ ಎದುಸಿರು ಬಿಡುತ್ತಾ ಇದ್ದರು. ಆಸ್ಪತ್ರೆಯವರು ಎಮರ್ಜೆನ್ಸಿ ಎಂದು ಗಾಡಿ ತೆಗೆದುಕೊಂಡು ಬಂದರು ಹಾಗೂ ಒಳಗಡೆ ಕರೆದುಕೊಂಡು ಹೋದರು. ರಿಕ್ಷಾದವನನ್ನು ಕಳಿಸಿ, ನಾನು ತಂಗಿ ಹೊರಗಡೆ ಕಾಯುತ್ತಿದ್ದೆವು. ನಾನು ವಿಷಯವನ್ನು ಅಪ್ಪನಿಗೂ ತಿಳಿಸಿದೆ . ಸುಮಾರು ಸಮಯ ಕಳೆದಾಗ ಡಾಕ್ಟರ್ ಹೊರಗೆ ಬಂದು, “ sorry….ಅವರಿಗೆ ಹಾರ್ಟ್ ಸಮಸ್ಯೆ ಇತ್ತು ಹಾಗೂ ನಮಗೆ ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ” ಎಂದಾಗ . ಜೋರಾಗಿ ಹಾರ್ನ್ ಸದ್ದು ನನ್ನ ಕಿವಿಗಪ್ಪಾಳಿಸಿತು.ಸುತ್ತಮುತ್ತ ನೋಡಿದಾಗ ನಾನಿನ್ನೂ ಬಸ್ ಸೀಟಿ ನಲ್ಲೇ ಇದ್ದೆ, ಮನೆಗೆ ತಲುಪಿರಲಿಲ್ಲ.. ಇಷ್ಟೊಂದು ಭಯಾನಕ ಕನಸು ಬಿತ್ತು ಎಂದು ನೆನೆಸಿಕೊಳ್ಳುವಾಗಲೇ ಮೈ ಜುಮ್ಮoದಿತು. ದೇವರಲ್ಲಿ ಪ್ರಾರ್ಥಿಸಿದೆ, “ಅಮ್ಮನಿಗೆ ಏನೂ ಆಗದಿರಲಿ” ಎಂದು. ಆದರೆ ಮನಸ್ಸಿನಲ್ಲಿ ಏನೋ ಕಸಿವಿಸಿ, ಅದೇ ಕನಸು ಮತ್ತೆ ಮತ್ತೆ ನೆನಪಾಗಿ ನಾನು ಹೆದರಿ ಬೆವರುತ್ತಿದ್ದೆ .
ಸ್ವಲ್ಪ ಹೊತ್ತಿನಲ್ಲಿ ಮನೆಗೆ ತಲುಪಿದೆ. ಮೊದಲು ಓಡಿಹೋಗಿ ಅಮ್ಮನನ್ನು ಗಟ್ಟಿಯಾಗಿ ತಬ್ಬಿಕೊಂಡೆ. ಆರೋಗ್ಯವಾಗಿದ್ದಳು.ಇಷ್ಟು ದಿನಗಳ ಕಾತರದ ನಂತರ ಸಿಕ್ಕಿದ ಸಂತೋಷ ಹಾಗೂ ಕನಸು ನನಸಾಗದ ಹರುಷದಲ್ಲಿ ನಾನು ಕುಣಿದು ಕುಪ್ಪಳಿಸಿದೆ . ಇನ್ನೆಂದೂ ಇಂತಹ ಕನಸು ಬೀಳದಿರಲೆಂದು ಮತ್ತೆ ಮತ್ತೆ ದೇವರಿಗೆ ಪ್ರಾರ್ಥನೆ ಮಾಡಿಕೊಂಡೆ. ಅದೇ ಯೋಚನೆ ಮತ್ತೆ ಮತ್ತೆ ಬರುತ್ತಿದ್ದುದರಿಂದ, ಮರೆಯುವ ವರೆಗೆ ಅಮ್ಮನ ಸೆರಗು ಹಿಡಿದೇ ಇರುತ್ತಿದ್ದೆ.
✍️ಬರಹ : ಭಾರತೀ ನೀರ್ಪಾಜೆ ಹೌಸ್