ಕುಂಜತ್ತೂರಿನಲ್ಲಿ ಅಪರೂಪದ ಹಣ್ಣುಗಳ ತೋಟ – ಪ್ರವಾಸಿ ಸನ ಸಲೀಂ ಅವರ ಹಸಿರು ಸಾಧನೆ

ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಕುಂಜತ್ತೂರಿನಲ್ಲಿ ಅಪರೂಪದ ಹಣ್ಣುಗಳ ತೋಟವು ಎಲ್ಲರ ಗಮನ ಸೆಳೆಯುತ್ತಿದೆ. ಈ ವಿಶಿಷ್ಟ ತೋಟವು ಸ್ಥಳೀಯ ಉದ್ಯಮಿ ಹಾಗೂ ಪ್ರವಾಸಿ ಸನಾ ಸಲೀಂ ಅವರ ಮನೆಯ ಆವರಣದಲ್ಲಿ ಬೆಳೆದು ನಿಂತಿದೆ. ಇಲ್ಲಿ ಕಣ್ಣಿಗೆ ಹಬ್ಬದಂತೆ ಕಾಣುವ ಈಂತಪ್ಪಳ (ಖರ್ಜೂರ) ಮರಗಳು ತುಂಬು ಫಲಗಳಿಂದ ಕಂಗೊಳಿಸುತ್ತಿವೆ.

ಈ ತೋಟದಲ್ಲಿ ಬದಾಮ್ ಮಾವು, ಮಲ್ಲಿಕಾ ಮಾವು, ಕಾಲಪ್ಪಾಡಿ ಮಾವು, ಕೆನಿಯನ್ ಮಾವು ಸೇರಿದಂತೆ ವಿವಿಧ ಮಾವಿನ ತಳಿಗಳು ಬೆಳೆಸಲಾಗಿದೆ. ಜೊತೆಗೆ ಚಾಂಪೆ, ಮಲ್ಬೆರಿ, ಮಿರಾಕಲ್ ಫ್ರೂಟ್ ಮುಂತಾದ ಹಲವು ಅಪರೂಪದ ಹಣ್ಣುಗಳೂ ಇಲ್ಲಿ ದೊರೆಯುತ್ತವೆ. ವಿಶೇಷ ಆಕರ್ಷಣೆಯಾಗಿ ಐದುಕ್ಕೂ ಹೆಚ್ಚು ಖರ್ಜುರ ಮರಗಳು ಸಮೃದ್ಧ ಫಲಧಾರಣೆಯೊಂದಿಗೆ ನೋಡುಗರ ಮನ ಸೆಳೆಯುತ್ತಿವೆ.

ಸುಮಾರು ಆರು ವರ್ಷಗಳ ಹಿಂದೆ ಆಂಧ್ರ ಪ್ರದೇಶದಿಂದ ತರಿಸಿಕೊಂಡು ನೆಟ್ಟ ಖರ್ಜುರ ಮರಗಳು, “ನಮ್ಮ ಪ್ರದೇಶದಲ್ಲಿ ಬೆಳೆಯುವುದಿಲ್ಲ” ಎಂಬ ಅಭಿಪ್ರಾಯಗಳ ನಡುವೆಯೂ ಇಂದು ಯಶಸ್ವಿಯಾಗಿ ಫಲ ನೀಡುತ್ತಿರುವುದು ಗಮನಾರ್ಹವಾಗಿದೆ. ಇದು ಸನ ಸಲೀಂ ಅವರಿಗೆ ಹೊಸ ವಿಶ್ವಾಸವನ್ನು ನೀಡಿದೆ.

ಇದರ ಜೊತೆಗೆ ಕಿತ್ತಳೆ, ಮೂಸಂಬಿ, ರಂಬೂಟಾನ್, ಚೆರಿ ಹಣ್ಣುಗಳೂ ತೋಟದಲ್ಲಿ ಬೆಳೆದು ನಿಂತಿವೆ. ಹಣ್ಣುಗಳಷ್ಟೇ ಅಲ್ಲದೆ ಹಲವು ಔಷಧೀಯ ಸಸ್ಯಗಳೂ ಇಲ್ಲಿ ಸಮೃದ್ಧವಾಗಿ ಬೆಳೆಯುತ್ತಿವೆ. ಸಂಪೂರ್ಣವಾಗಿ ಜೈವಿಕ ಗೊಬ್ಬರ ಬಳಸಿ ಸ್ವಂತ ಕೃಷಿ ವಿಧಾನದಲ್ಲಿ ಈ ತೋಟವನ್ನು ಅಭಿವೃದ್ಧಿಪಡಿಸಲಾಗಿದೆ.

ತೋಟದ ನಿರ್ವಹಣೆಗೆ ಕಾರ್ಮಿಕರು ಮತ್ತು ಕುಟುಂಬದವರ ಸಹಕಾರವಿದ್ದರೂ, ಪ್ರವಾಸಿ ಜೀವನದ ವ್ಯಸ್ತತೆಯ ನಡುವೆಯೂ ಸನ ಸಲೀಂ ಸಮಯ ಸಿಕ್ಕಾಗಲೆಲ್ಲಾ ತಮ್ಮ ಹಸಿರು ಹವ್ಯಾಸವನ್ನು ಉಳಿಸಿಕೊಳ್ಳಲು ಇಲ್ಲಿಗೆ ಭೇಟಿ ನೀಡುತ್ತಾರೆ. ತಮ್ಮ ಅಗತ್ಯಕ್ಕಿಂತ ಹೆಚ್ಚು ಉತ್ಪಾದನೆಯಾಗುವ ಹಣ್ಣುಗಳನ್ನು ಮನೆಗೆ ಬರುವ ಅತಿಥಿಗಳಿಗೆ ಸಹ ಸಂತೋಷದಿಂದ ಹಂಚುತ್ತಾರೆ.

ಇದಲ್ಲದೆ ವಿವಿಧ ಜಾತಿಯ ಕೋಳಿಗಳು, ಬಾತುಕೋಳಿಗಳು, ಟರ್ಕಿ ಕೋಳಿಗಳು ಹಾಗೂ ಸಾಕುಪಕ್ಷಿಗಳನ್ನೂ ಈ ಮನೆ ಆವರಣದಲ್ಲಿ ಸಾಕಲಾಗಿದೆ. ಕೃಷಿ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ಯುವ ಪೀಳಿಗೆಗೆ ಸನ ಸಲೀಂ ಅವರ ಈ ಪ್ರಯತ್ನವು ಪ್ರೇರಣೆಯಾಗಿ ಪರಿಣಮಿಸಿದ್ದು, ಮಾದರಿ ಕೃಷಿಕರಾಗಿ ಗುರುತಿಸಿಕೊಂಡಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!