ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಪೊಸೋಟ್ ಸೇತುವೆ ಕೆಳಭಾಗದಲ್ಲಿ ರಾತ್ರಿ ವೇಳೆ ಟ್ಯಾಂಕರ್ ಲಾರಿಗಳ ಮೂಲಕ ಶೌಚಾಲಯ ಮಲಿನ ನೀರನ್ನು ನದಿಗೆ ಬಿಡುತ್ತಿರುವ ಘಟನೆ ಬೆಳಕಿಗೆ ಬಂದಿದೆ. ಈ ಕೃತ್ಯದಿಂದ ಸುತ್ತಮುತ್ತಲಿನ ನೂರಕ್ಕೂ ಹೆಚ್ಚು ಮನೆಗಳ ನಿವಾಸಿಗಳು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ.
ಸ್ಥಳೀಯರ ಪ್ರಕಾರ, ಮಲಿನ ನೀರು ನದಿಗೆ ಹರಿಯುವುದರಿಂದ ದುರ್ವಾಸನೆ ವ್ಯಾಪಕವಾಗಿ ಹರಡುತ್ತಿದ್ದು, ಜನರು ಮೂಗು ಮುಚ್ಚಿಕೊಂಡೇ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವಾರು ಮನೆಗಳ ಬಾವಿಗಳಿಗೂ ಈ ಮಲಿನ ನೀರು ಸೇರಿಕೊಂಡಿರುವುದಾಗಿ ಆರೋಪಿಸಲಾಗಿದೆ.
ಇದೇ ಪ್ರದೇಶದಲ್ಲಿ ಈ ಹಿಂದೆ ಕೂಡ ಟ್ಯಾಂಕರ್ ಮೂಲಕ ಮಲಿನ ನೀರನ್ನು ಬಿಡಲಾಗಿದ್ದ ಘಟನೆಗಳು ನಡೆದಿದ್ದವು ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪರಿಸರ ಮಾಲಿನ್ಯ ಮತ್ತು ಆರೋಗ್ಯ ಸಮಸ್ಯೆಗಳ ಬಗ್ಗೆ ಜನರು ಗಂಭೀರ ಆತಂಕ ವ್ಯಕ್ತಪಡಿಸಿದ್ದಾರೆ.
ಪೊಲೀಸರು ಇಂತಹ ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸಿದರೂ, ಅಲ್ಪ ಪ್ರಮಾಣದ ದಂಡ ವಿಧಿಸಿ ಬಿಡಲಾಗುತ್ತಿರುವುದರಿಂದ ತಪ್ಪಿತಸ್ಥರು ಮತ್ತೆ ಇದೇ ಕೃತ್ಯಗಳನ್ನು ಮುಂದುವರಿಸುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಈ ಪ್ರದೇಶದ ಸಮೀಪದಲ್ಲೇ ಮಸೀದಿ ಮತ್ತು ದೇವಾಲಯವೂ ಇರುವುದರಿಂದ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಿದೆ.
ಘಟನೆಯ ವಿರುದ್ಧ ಸ್ಥಳೀಯರು ಪಂಚಾಯತ್ ಹಾಗೂ ಆರೋಗ್ಯ ಇಲಾಖೆಗೆ ದೂರು ಸಲ್ಲಿಸಿದ್ದು, ತಕ್ಷಣ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.