ಮಂಗಳೂರು: ಸುರತ್ಕಲ್ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ (ರಿ.) ಹಾಗೂ ಸುರತ್ಕಲ್ ಸ್ಪೋರ್ಟ್ಸ್ & ಕಲ್ಚರಲ್ ಸೇವಾ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ರಾಜ್ಯ ಮಟ್ಟದ 45 ವರ್ಷ ಮೇಲ್ಪಟ್ಟ ಆಟಗಾರರ ‘ಓವರ್ ಆರ್ಮ್’ ಕ್ರಿಕೆಟ್ ಪಂದ್ಯಾವಳಿ ‘ಲೆಜೆಂಡ್ಸ್ ಕ್ರಿಕೆಟ್ ಲೀಗ್ (ಎಲ್‌ಸಿಎಲ್) ಸೀಸನ್–5’ ಮೇ 9 ಮತ್ತು 10ರಂದು ಸುರತ್ಕಲ್‌ನ ಗೋವಿಂದದಾಸ ಕಾಲೇಜು ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಕಾರ್ಯದರ್ಶಿ ಕಿರಣ್ ಆಚಾರ್ಯ ತಿಳಿಸಿದ್ದಾರೆ.
ನಗರದ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಐದು ವರ್ಷಗಳಿಂದ ಯಶಸ್ವಿಯಾಗಿ ನಡೆಯುತ್ತಿರುವ ಈ ಕ್ರೀಡಾಕೂಟವು ಹಿರಿಯ ಕ್ರಿಕೆಟಿಗರನ್ನು ಒಗ್ಗೂಡಿಸುವ ‘ಹಿರಿಯರ ಕ್ರಿಕೆಟ್ ಹಬ್ಬ’ವಾಗಿ ರೂಪುಗೊಂಡಿದೆ ಎಂದರು.
ಪಂದ್ಯಾವಳಿಯಲ್ಲಿ ವಿಜೇತ ತಂಡಗಳಿಗೆ ಭರ್ಜರಿ ನಗದು ಬಹುಮಾನ ಹಾಗೂ ಟ್ರೋಫಿಗಳನ್ನು ಘೋಷಿಸಲಾಗಿದ್ದು, ಪ್ರಥಮ ಬಹುಮಾನವಾಗಿ ರೂ. 1,00,005 ನಗದು ಹಾಗೂ ಟ್ರೋಫಿ, ದ್ವಿತೀಯ ಬಹುಮಾನವಾಗಿ ರೂ. 50,005 ನಗದು ಹಾಗೂ ಟ್ರೋಫಿ ನೀಡಲಾಗುತ್ತದೆ. ತೃತೀಯ ಹಾಗೂ ಚತುರ್ಥ ಬಹುಮಾನವಾಗಿ ಆಕರ್ಷಕ ಟ್ರೋಫಿಗಳನ್ನು ಪ್ರದಾನ ಮಾಡಲಾಗುತ್ತದೆ.
ರಾಜ್ಯದ ವಿವಿಧ ಭಾಗಗಳಿಂದ 45 ವರ್ಷ ಮೇಲ್ಪಟ್ಟ ನುರಿತ ಆಟಗಾರರ ತಂಡಗಳು ಭಾಗವಹಿಸಲಿದ್ದು, ಕ್ರಿಕೆಟ್ ಪ್ರೇಮಿಗಳಿಗೆ ಹಳೆಯ ನೆನಪುಗಳನ್ನು ಮರುಕಳಿಸುವಂತಿದೆ. ಪಂದ್ಯಾವಳಿಗೆ ಅಗತ್ಯವಿರುವ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಗೌರವಾಧ್ಯಕ್ಷ ಮಹಾಬಲ ಪೂಜಾರಿ ಕಡಂಬೋಡಿ ಹಾಗೂ ಸದಸ್ಯ ಪೃಥ್ವಿರಾಜ್ ಶೆಟ್ಟಿ ಉಪಸ್ಥಿತರಿದ್ದರು.