ಪೆರ್ಲ : ಎಣ್ಮಕಜೆ ಪಂಚಾಯತಿನ 16ನೇ ವಾರ್ಡಿನ ಬೆದ್ರಂಪಳ್ಳ ಬನ -ಬಲ್ತಕಲ್ಲು- ಪಾಟ್ಲದಳ ಸಂಪರ್ಕ ರಸ್ತೆ ಅಭಿವೃದ್ಧಿ ಕಾಮಗಾರಿ ಕಳಪೆ ಮಟ್ಟದ್ದಾಗಿದ್ದು ಗುತ್ತಿಗೆದಾರನ ಅವ್ಯವಹಾರ ಆರೋಪಿಸಿ ನಾಗರಿಕರು ಕಾಮಗಾರಿಗೆ ತಡೆಯೊಡ್ಡಿದರು. ಮಂಜೇಶ್ವರ ಶಾಸಕ ಎಕೆಎಂ ಆಶ್ರಫ್ 2023-24 ರ
ರಾಜ್ಯ ಸರಕಾರದ ಬಜೆಟ್ ನಲ್ಲಿ ಸುಮಾರು 70 ಲಕ್ಷ ರೂ ಯೋಜನೆ ಮೀಸಲಿರಿಸಿ ಉತ್ತಮ ರಸ್ತೆ ನಿರ್ಮಾಣಕ್ಕೆ ಹಸೈನಾರ್ ಪೆರ್ಲ ಎಂಬವರ ಮಾಲಕತ್ವದ ಕಂಪೆನಿಯೊಂದಕ್ಕೆ ಗುತ್ತಿಗೆ ನೀಡಲಾಗಿತ್ತು. ಇದೀಗ ಕಳಪೆ ಮಟ್ಟದ ಡಾಮರು, ಜಲ್ಲಿ ಕಲ್ಲುಗಳನ್ನು ಉಪಯೋಗಿಸಿ ಯೋಜನೆಯಲ್ಲಿ ಸೂಚಿಸಿದ ರೀತಿಯಲ್ಲಿ ರಸ್ತೆ ಅಭಿವೃದ್ಧಿಪಡಿಸದಿರುವುದರ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
ಈ ಬಗ್ಗೆ ಲೋಕೋಪಯೋಗಿ ಇಲಾಖೆ ಇಂಜಿನಿಯರ್, ಬ್ಲೋಕ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಗೆ ದೂರು ನೀಡಿದ್ದು ಅವರು ಸೋಮವಾರ ಸಂಜೆ ಸ್ಥಳ ಸಂದರ್ಶಿಸಿ ಪರಿಶೀಲನೆಗೈದು ಗುತ್ತಿಗೆದಾರನ ವಿರುದ್ಧ ತನಿಖೆ ಕೈಗೆತ್ತಿಕೊಂಡಿದ್ದಾರೆ. ಈ ಪ್ರದೇಶದ ಬಹು ಸಂಪರ್ಕ ರಸ್ತೆ ಇದಾಗಿದ್ದು ಈ ಹಿಂದೆ ಡಾಮಾರು ಎದ್ದು ಹೋಗಿ ಹೊಂಡ ಗುಂಡಿಗಳಾಗಿದ್ದ ರಸ್ತೆಗೆ ವಾರ್ಡ್ ಸದಸ್ಯರಾದ ರಾಧಾಕೃಷ್ಣ ನಾಯಕ್ ಶೇಣಿ ಅವರು ಮುತುವರ್ಜಿವಹಿಸಿ ಶಾಸಕರ ಮೂಲಕ ಯೋಜನೆ ಮಂಜೂರುಗೊಳಿಸಿ 2025 ಜೂನ್ ಜೂನ್ 23ರಂದು ರಸ್ತೆ ಅಭಿವೃದ್ಧಿ ಕಾಮಗಾರಿ ಉದ್ಘಾಟಿಸಲಾಗಿತ್ತು.