ಮಂಗಳೂರು: ಭಾರತೀಯ ಚಾರ್ಟಡ್ ಅಕೌಂಟೆಂಟ್ಸ್ ಸಂಸ್ಥೆ (ICAI) ಮಂಗಳೂರು ಶಾಖೆಯ ವತಿಯಿಂದ ಚಾರ್ಟಡ್ ಅಕೌಂಟೆಂಟ್ ಸದಸ್ಯರಿಗಾಗಿ ‘ಅಧಿಗಮ – ಜ್ಞಾನ ಬಲವರ್ಧನೆ’ ಶೀರ್ಷಿಕೆಯಡಿ ರಾಷ್ಟ್ರೀಯ ಸಮ್ಮೇಳನವನ್ನು ಮೇ 15 ಮತ್ತು 16ರಂದು ನಗರದ ಪಾಲೆಮಾರ್ ಕನ್ವೆನ್ಷನ್ ಸೆಂಟರ್‌ನಲ್ಲಿ ಆಯೋಜಿಸಲಾಗಿದೆ ಎಂದು ಶಾಖೆಯ ಅಧ್ಯಕ್ಷ ಸಿಎ ಡ್ಯಾನಿಯಲ್ ಮಾರ್ಷ್ ಪೆರಿಯರಾ ತಿಳಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ವಿವಿಧ ಭಾಗಗಳಿಂದ ಸುಮಾರು 500ಕ್ಕೂ ಅಧಿಕ ಚಾರ್ಟಡ್ ಅಕೌಂಟೆಂಟ್‌ಗಳು ಹಾಗೂ ವೃತ್ತಿಪರರು ಸಮ್ಮೇಳನದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಹೇಳಿದರು.
ವೃತ್ತಿಯಲ್ಲಿ ಉದಯೋನ್ಮುಖ ಬೆಳವಣಿಗೆಗಳು, ತಂತ್ರಜ್ಞಾನ ಆಧಾರಿತ ರೂಪಾಂತರ ಹಾಗೂ ಇತ್ತೀಚಿನ ಹಣಕಾಸು ನಿಯಂತ್ರಣ ಬದಲಾವಣೆಗಳ ಬಗ್ಗೆ ವೃತ್ತಿಪರರನ್ನು ಸಜ್ಜುಗೊಳಿಸುವುದು ಸಮ್ಮೇಳನದ ಮುಖ್ಯ ಉದ್ದೇಶವಾಗಿದೆ ಎಂದು ವಿವರಿಸಿದರು.
ಮೇ 15ರಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ನಿಟ್ಟೆ ವಿಶ್ವವಿದ್ಯಾಲಯದ ಸಹ-ಕುಲಾಧಿಪತಿ ಪ್ರೊ. ಶಾಂತಾರಾಮ್ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದರು.
ಸಮ್ಮೇಳನದಲ್ಲಿ ಒಟ್ಟು ಏಳು ತಾಂತ್ರಿಕ ಅಧಿವೇಶನಗಳು ನಡೆಯಲಿದ್ದು, ಸೈಬರ್ ಭದ್ರತೆ, ಉತ್ತರಾಧಿಕಾರ ಯೋಜನೆ (Succession Planning), ಡಿಜಿಟಲ್ ಯುಗದಲ್ಲಿನ ವೃತ್ತಿಪರ ಅವಕಾಶಗಳು ಹಾಗೂ 2025ರ ಆದಾಯ ತೆರಿಗೆ ಕಾಯ್ದೆಯಡಿ ಮರುಮೌಲ್ಯಮಾಪನ ಪ್ರಕ್ರಿಯೆಗಳ ಕುರಿತು ದೇಶದ ಖ್ಯಾತ ವಿಷಯ ತಜ್ಞರು ಉಪನ್ಯಾಸ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಐಸಿಎಐ ಕೇಂದ್ರ ಮಂಡಳಿ ಸದಸ್ಯರಾದ ಸಿಎ ದಯಾನಿವಾಸ ಶರ್ಮಾ, ಸಿಎ ಪ್ರಮೋದ್ ಜೈನ್ ಹಾಗೂ ಸಿಎ ಕಾರ್ತಿಕೇಯ ಶೆಣೈ ಸೇರಿದಂತೆ ಹಲವು ಗಣ್ಯರು ವಿವಿಧ ವಿಷಯಗಳ ಕುರಿತು ಮಾತನಾಡಲಿದ್ದಾರೆ. ಅಲ್ಲದೆ, ‘ವಿಷನ್ ಮಂಗಳೂರು 2030’ ವಿಷಯದ ಕುರಿತ ವಿಶೇಷ ಪ್ಯಾನಲ್ ಚರ್ಚೆ ನಡೆಯಲಿದ್ದು, ಉದ್ಯಮಿಗಳಾದ ಮಿಥುನ್ ಡಿಸೋಜಾ ಹಾಗೂ ಅಧೀಕ್ಷಾ ಅಮೀನ್ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಶಾಖೆಯ ಉಪಾಧ್ಯಕ್ಷೆ ಸಿಎ ಮಮತಾ ರಾವ್, ಕಾರ್ಯದರ್ಶಿ ಸಿಎ ಬಾಲಸುಬ್ರಹ್ಮಣ್ಯ ಎನ್., ಖಜಾಂಚಿ ಸಿಎ ನಿತಿನ್ ಬಾಳಿಗಾ ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.