ಕುಂಜತ್ತೂರು: ಬಸ್ ಚಾಲಕರ ಹಠಮಾರಿ ಧೋರಣೆಗೆ ಹೆಚ್ಚಿದ ಅಪಘಾತದ ಭೀತಿ: ಸಾರಿಗೆ ನಿಯಮ ಪಾಲಿಸುವಂತೆ ಮುಸ್ಲಿಂ ಯೂತ್ ಲೀಗ್ ಟೌನ್ ಕಮಿಟಿಯಿಂದ ಕಡಕ್ ಎಚ್ಚರಿಕೆ

ಮಂಜೇಶ್ವರ: ಕುಂಜತ್ತೂರು ಜಂಕ್ಷನ್‌ನಲ್ಲಿ ತಲಪಾಡಿ ಕಡೆಗೆ ಹೋಗುವ ಖಾಸಗಿ ಹಾಗೂ ಕೆ.ಎಸ್.ಆರ್.ಟಿ.ಸಿ ಬಸ್‌ಗಳು ನಿಗದಿಪಡಿಸಿದ ಬಸ್ ನಿಲ್ದಾಣದಲ್ಲಿ ನಿಲ್ಲಿಸದೆ, ಅಂಡರ್‌ಪಾಸ್ ಬಳಿಯೇ ನಿಲ್ಲಿಸುತ್ತಿರುವುದರಿಂದ ಅಪಘಾತಗಳು ನಿತ್ಯ ದರ್ಶನವಾಗಿದೆ.

ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯಾದ ನಂತರ ಅಂಡರ್‌ಪಾಸ್ ಬಳಿ ಬಸ್‌ಗಳನ್ನು ಬೇಕಾಬಿಟ್ಟಿಯಾಗಿ ನಿಲ್ಲಿಸುತ್ತಿರುವುದು ಇತರ ವಾಹನ ಸವಾರರಿಗೆ ಮತ್ತು ಪಾದಚಾರಿಗಳಿಗೆ ದೊಡ್ಡ ಪ್ರಾಣಭೀತಿಯನ್ನು ತಂದೊಡ್ಡಿದೆ.

​ಈ ಬಗ್ಗೆ ಸಾರ್ವಜನಿಕರು ಮತ್ತು ಸ್ಥಳೀಯರು ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳನ್ನು ಹಾಗೂ ಪೊಲೀಸರನ್ನು ಸಂಪರ್ಕಿಸಿದರೂ ಯಾರೂ ಇತ್ತಕಡೆ ತಿರುಗಿಯೂ ನೋಡಿಲ್ಲವೆಂಬ ಆರೋಪವಿದೆ.

​ಈ ಹಿನ್ನೆಲೆಯಲ್ಲಿ ಕುಂಜತ್ತೂರು ಮುಸ್ಲಿಂ ಯೂತ್ ಲೀಗ್ ಟೌನ್ ಕಮಿಟಿ ನೇತೃತ್ವದಲ್ಲಿ ಜನಪ್ರತಿನಿಧಿಗಳು ಹಾಗೂ ಪದಾಧಿಕಾರಿಗಳು ರಸ್ತೆಗಿಳಿದು ಜಾಗೃತಿ ಮೂಡಿಸಿದರು.

ಕಾನೂನು ಉಲ್ಲಂಘಿಸಿ ಅಂಡರ್‌ಪಾಸ್ ಬಳಿ ನಿಲ್ಲಿಸುತ್ತಿದ್ದ ಬಸ್‌ಗಳನ್ನು ತಡೆದ ನಾಯಕರು, ಬಸ್ ಚಾಲಕರು ಹಾಗೂ ನಿರ್ವಾಹಕರಿಗೆ ಪರಿಸ್ಥಿತಿಯ ಗಂಭೀರತೆಯನ್ನು ಮನವರಿಕೆ ಮಾಡಿಕೊಟ್ಟರು. ಅಲ್ಲದೆ, ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಬಸ್‌ಗಳನ್ನು ಕಡ್ಡಾಯವಾಗಿ ಬಸ್ ಸ್ಟ್ಯಾಂಡ್ ಬಳಿಯೇ ನಿಲ್ಲಿಸಬೇಕೆಂದು ಒತ್ತಾಯಿಸಿದರು.

​ಬ್ಲಾಕ್ ಪಂಚಾಯತ್ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಹನೀಫ್ ಕುಚ್ಚಿಕ್ಕಾಡ್, ಸಾಮಾಜಿಕ ಕಾರ್ಯಕರ್ತ ಹಾಗೂ ವಾರ್ಡ್ ಸದಸ್ಯರಾದ ಇಲ್ಯಾಸ್ ತೂಮಿನಾಡು ಹಾಗೂ ಟೌನ್ ಕಮಿಟಿ ಅಧ್ಯಕ್ಷ ನೌಸಿಲ್ ಸೇರಿದಂತೆ ಪ್ರಮುಖ ನಾಯಕರು ಈ ಜಾಗೃತಿ ಕಾರ್ಯಕ್ರಮಕ್ಕೆ ನೇತೃತ್ವ ವಹಿಸಿದ್ದರು.

​ಬಸ್ ಸಿಬ್ಬಂದಿ ಈ ಸೂಚನೆಯನ್ನು ಪಾಲಿಸಬೇಕು, ಮುಂಬರುವ ದಿನಗಳಲ್ಲೂ ಕಾನೂನು ಉಲ್ಲಂಘನೆ ಮುಂದುವರಿದರೆ ತೀವ್ರ ಸ್ವರೂಪದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಟೌನ್ ಕಮಿಟಿ ಪದಾಧಿಕಾರಿಗಳು ಎಚ್ಚರಿಸಿದ್ದಾರೆ.

ಜೊತೆಗೆ ಮೋಟಾರು ವಾಹನ ಇಲಾಖೆ ಹಾಗೂ ಪೊಲೀಸ್ ಇಲಾಖೆ ತಕ್ಷಣವೇ ಮಧ್ಯಪ್ರವೇಶಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!