ಕಾಸರಗೋಡು: ಮಧ್ಯಾಹ್ನದ ವೇಳೆ ಬೈಕ್ನಲ್ಲಿ ಬಂದ ದುಷ್ಕರ್ಮಿಗಳ ತಂಡವೊಂದು ಮಹಿಳೆಯನ್ನು ತಳ್ಳಿ, ಅವರ ಕುತ್ತಿಗೆಯಲ್ಲಿದ್ದ ಮೂರು ಪವನ್ ತೂಕದ ಚಿನ್ನದ ತಾಲಿಸರವನ್ನು ಕಸಿದುಕೊಂಡು ಪರಾರಿಯಾಗಿರುವ ಘಟನೆ ಕಾಸರಗೋಡಿನ ಮಾವುಂಗಾಲ್ನಲ್ಲಿ ನಡೆದಿದೆ.
ನೆಲ್ಲಿತ್ತರ ಫುಡ್ ಪ್ರೊಡಕ್ಟ್ಸ್ ಸಂಸ್ಥೆಯ ಉದ್ಯೋಗಿ, ಪುಲಯನಡುಕದ ರವಿ ಅವರ ಪತ್ನಿ ಕೆ.ಸಿಂಧು (42) ಸರ ಕಳೆದುಕೊಂಡ ಮಹಿಳೆ. ಸಿಂಧು ಕೆಲಸ ಮುಗಿಸಿ ಮನೆಗೆ ವಾಪಸ್ಸಾದ ನಂತರ, ಸ್ಕೂಟರ್ನಲ್ಲಿ ಅಂಗಡಿಗೆ ಸಾಮಗ್ರಿ ತರಲು ತೆರಳಿದ್ದರು. ಮರಳಿ ಮನೆಗೆ ಹಿಂತಿರುಗುತ್ತಿದ್ದಾಗ, ಬಿಳಿ ಬಣ್ಣದ ಹಳೆಯ ಮಾದರಿಯ ಸ್ಕೂಟರ್ನಲ್ಲಿ ಬಂದ ಇಬ್ಬರು ಅಪರಿಚಿತರು ಅವರನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ. ಇಬ್ಬರೂ ಆರೋಪಿಗಳು ಹೆಲ್ಮೆಟ್ ಧರಿಸಿದ್ದರು ಎಂದು ತಿಳಿದುಬಂದಿದೆ.

ಸಿಂಧು ಮನೆ ಸಮೀಪ ತಲುಪುತ್ತಿದ್ದಂತೆಯೇ, ದುಷ್ಕರ್ಮಿಗಳು ಅವರ ವಾಹನವನ್ನು ಅಡ್ಡಗಟ್ಟಿದ್ದಾರೆ. ಈ ವೇಳೆ ಸ್ಕೂಟರ್ನ ಹಿಂಬದಿಯಲ್ಲಿದ್ದ ವ್ಯಕ್ತಿ ಕೆಳಗಿಳಿದು ಸಿಂಧುವನ್ನು ತಳ್ಳಿದ್ದಾರೆ. ಕೆಳಗೆ ಬಿದ್ದ ಮಹಿಳೆಯ ಕುತ್ತಿಗೆಯಲ್ಲಿದ್ದ ಮೂರು ಪವನ್ ತೂಕದ ತಾಲಿಸರವನ್ನು ಬಲವಂತವಾಗಿ ಕಿತ್ತುಕೊಂಡು ಆರೋಪಿಗಳು ಕ್ಷಣಾರ್ಧದಲ್ಲಿ ಪರಾರಿಯಾಗಿದ್ದಾರೆ.
ಘಟನೆ ಕುರಿತು ಮಾಹಿತಿ ತಿಳಿದ ತಕ್ಷಣವೇ ಕಾಂಞಂಗಾಡ್ ಸಿಐ ಕೆ. ದಿನೇಶ್ ನೇತೃತ್ವದ ಪೊಲೀಸ್ ತಂಡವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಆರೋಪಿಗಳ ಪತ್ತೆಗಾಗಿ ಘಟನಾ ಸ್ಥಳದ ಸಮೀಪವಿರುವ ವಿವಿಧ ಸಂಸ್ಥೆಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಸಂಗ್ರಹಿಸಿದ್ದು, ತೀವ್ರ ತನಿಖೆ ಮುಂದುವರಿಸಿದ್ದಾರೆ.
ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಇತ್ತೀಚೆಗೆ ಇಂತಹ ಸರಗಳ್ಳತನದ ಪ್ರಕರಣಗಳು ಮರುಕಳಿಸುತ್ತಿವೆ. ಕಳೆದ ದಿನವಷ್ಟೇ ಉಪ್ಪಳ ಮತ್ತು ಪಯ್ಯನ್ನೂರಿನಲ್ಲಿ ಇದೇ ಮಾದರಿಯಲ್ಲಿ ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಚಿನ್ನಾಭರಣ ದೋಚಿದ ಘಟನೆಗಳು ವರದಿಯಾಗಿದ್ದವು


