ಬದಿಯಡ್ಕದ ಕನ್ಯಪ್ಪಾಡಿಯಲ್ಲಿ ಅಂಗಡಿ ಮುಂಭಾಗದಲ್ಲಿ ಮಲಗಿದ್ದ ಹಸುವಿನ ಕಳ್ಳತನ; ಇಬ್ಬರ ಬಂಧನ

ಕಾಸರಗೋಡು : ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಕನ್ಯಪ್ಪಾಡಿಯಲ್ಲಿ ಅಂಗಡಿ ಮುಂಭಾಗದಲ್ಲಿ ಮಲಗಿದ್ದ ಹಸುವನ್ನು ಕಳವು ಮಾಡಿ ಕಾರಿನಲ್ಲಿ ಸಾಗಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಕಳ್ಳತನಕ್ಕೆ ಬಳಸಿದ್ದ ಕಾರನ್ನೂ ವಶಪಡಿಸಿಕೊಳ್ಳಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನೂ ಮೂವರು ಸಹಆರೋಪಿಗಳ ಪತ್ತೆಗೆ ತನಿಖೆ ತೀವ್ರಗೊಳಿಸಲಾಗಿದೆ.

ಬಂಧಿತರನ್ನು ಜೋಕಟ್ಟೆ ನಿವಾಸಿ ರಾಸಿಖ್ (21) ಹಾಗೂ ಉಳ್ಳಾಲ ಸಮೀಪದ ಅಳಿಕೆ ನಿವಾಸಿ ಮೊಹಮ್ಮದ್ ಇರ್ಬಾಸ್ (26) ಎಂದು ಗುರುತಿಸಲಾಗಿದೆ.

ಜೂನ್ 16ರಂದು ಮುಂಜಾನೆ ಸುಮಾರು 1.30ರ ವೇಳೆಗೆ ಈ ಘಟನೆ ನಡೆದಿದೆ. ಕನ್ಯಪ್ಪಾಡಿಯ ರಹ್ಮತ್ ಮಂಝಿಲ್ ನಿವಾಸಿ ಕೆ. ಎಂ. ಮೊಹಮ್ಮದ್ ಅವರ ಮನೆಯ ಮುಂಭಾಗದ ಅಂಗಡಿ ವರಾಂಡಾದಲ್ಲಿ ಮಲಗಿದ್ದ ಹಸುವನ್ನು ಕಳ್ಳರು ಕಳವು ಮಾಡಿದ್ದರು.ಮರುದಿನ ಬೆಳಿಗ್ಗೆ ಹಸು ಕಾಣೆಯಾಗಿದ್ದನ್ನು ಗಮನಿಸಿದ ಮನೆಯವರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ, ಹಸುವನ್ನು ಕಾರಿನಲ್ಲಿ ತುಂಬಿಕೊಂಡು ಹೋಗಿರುವುದು ದೃಢಪಟ್ಟಿತು. ಬಳಿಕ ಅವರು ಬದಿಯಡ್ಕ ಪೊಲೀಸರಿಗೆ ದೂರು ನೀಡಿದರು.

ಇನ್ಸ್‌ಪೆಕ್ಟರ್ ಅನೂಪ್ ಕೃಷ್ಣ ಅವರ ಮೇಲ್ವಿಚಾರಣೆಯಲ್ಲಿ ಎಎಸ್‌ಐ ಪ್ರಸಾದ್, ಹಿರಿಯ ಸಿವಿಲ್ ಪೊಲೀಸ್ ಅಧಿಕಾರಿ ಗೋಕುಲ್, ಹಾಗೂ ಸಿವಿಲ್ ಪೊಲೀಸ್ ಅಧಿಕಾರಿಗಳಾದ ಅಜಿತ್, ಶ್ರೀನೇಶ್ ಮತ್ತು ಹರಿಪ್ರಸಾದ್ ಅವರ ತಂಡ ಆರೋಪಿಗಳನ್ನು ಬಂಧಿಸಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!