ಕಾಸರಗೋಡು, ಜು. 7: ಭಾರೀ ಮಳೆ ಮತ್ತು ಬಿರುಗಾಳಿಯ ಪರಿಣಾಮ ಮರವೊಂದು ಮನೆ ಮೇಲೆ ಉರುಳಿಬಿದ್ದು ಮನೆ ಭಾಗಶಃ ಜಖಂಗೊಂಡ ಘಟನೆ ಕಾಸರಗೋಡು ಜಿಲ್ಲೆಯ ವೆಳ್ಳರಿಕುಂಡು ಸಮೀಪದ ಪ್ಲಾಚ್ಚಿಕರದ ಆವುಳ್ಳಕ್ಕೋಡಿನಲ್ಲಿ ಮಂಗಳವಾರ ಮುಂಜಾನೆ ನಡೆದಿದೆ.
ಆವುಳ್ಳಕ್ಕೋಡು ಅಂಗನವಾಡಿ ಸಮೀಪದ ‘ತೋಟ್ಟಿನಕರ’ ನಿವಾಸಿಗಳಾದ ಬಾಲಕೃಷ್ಣನ್ ಹಾಗೂ ಶಾರದಾ ಟಿ.ವಿ. ಅವರ ಮನೆ ಮೇಲೆ ಇಂದು ಮುಂಜಾನೆ ಸುಮಾರು 4 ಗಂಟೆ ವೇಳೆಗೆ ಬೃಹತ್ ಮರ ಉರುಳಿಬಿದ್ದಿದೆ.


ಮರವು ಮನೆಯ ಮೇಲ್ಛಾವಣಿ ಹಾಗೂ ಪಕ್ಕದಲ್ಲಿದ್ದ ದನದ ಕೊಟ್ಟಿಗೆಯ ಮೇಲೆ ಬಿದ್ದ ಪರಿಣಾಮ ಮನೆಗೆ ಭಾರಿ ಹಾನಿಯಾಗಿದೆ. ಆದರೆ, ಘಟನೆ ನಡೆದ ಸಂದರ್ಭದಲ್ಲಿ ಮನೆಯಲ್ಲಿ ಯಾರೂ ಇರದ ಕಾರಣ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿದೆ. ಕುಟುಂಬದವರು ಹಿಂದಿನ ದಿನವೇ ಸಮೀಪದ ತಮ್ಮ ಮಗಳ ಮನೆಗೆ ತೆರಳಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಘಟನೆಯ ಮಾಹಿತಿ ತಿಳಿದ ಕೂಡಲೇ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಮರ ತೆರವುಗೊಳಿಸುವ ಕಾರ್ಯಾಚರಣೆಯಲ್ಲಿ ತೊಡಗಿದರು. ಭಾರಿ ಗಾಳಿ ಮತ್ತು ಮಳೆಯಿಂದಾಗಿ ಪ್ರದೇಶದಲ್ಲಿ ಹಲವೆಡೆ ಮರಗಳು ಉರುಳಿಬಿದ್ದಿದ್ದು, ಆಸ್ತಿ-ಪಾಸ್ತಿಗೆ ಹಾನಿ ಉಂಟಾಗಿದೆ.


