ಕರ್ನಾಟಕ–ಗಡಿನಾಡು ಕನ್ನಡ ಸಮ್ಮೇಳನ 2026 ಸರ್ವಾಧ್ಯಕ್ಷರಾಗಿ ಡಾ. ಸಿ. ಸೋಮಶೇಖರ್ ಐಎಎಸ್ ಆಯ್ಕೆ

ಕಾಸರಗೋಡು, ಜು. 7: ಕಾಸರಗೋಡು ನುಳ್ಳಿಪ್ಪಾಡಿಯ ಕನ್ನಡ ಭವನ ಮತ್ತು ಗ್ರಂಥಾಲಯದ ರಜತ ಸಂಭ್ರಮ ಸಮಾರೋಪದ ಅಂಗವಾಗಿ ಜುಲೈ 26ರಂದು (ಭಾನುವಾರ) ಕನ್ನಡ ಭವನದ ಡಾ. ಲಲಿತಾ ಎಸ್.ಎನ್. ಭಟ್ ವೇದಿಕೆಯಲ್ಲಿ ನಡೆಯಲಿರುವ **”ಕರ್ನಾಟಕ–ಗಡಿನಾಡು ಕನ್ನಡ ಸಮ್ಮೇಳನ 2026″**ರ ಸರ್ವಾಧ್ಯಕ್ಷರಾಗಿ ಮಾಜಿ ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರು ಹಾಗೂ ಮುಂಬರುವ ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸೇವಾಕಾಂಕ್ಷಿಯಾಗಿರುವ ಡಾ. ಸಿ. ಸೋಮಶೇಖರ್, ಐಎಎಸ್ ಅವರನ್ನು ಆಯ್ಕೆ ಮಾಡಲಾಗಿದೆ.

ಡಾ. ವಾಮನ್ ರಾವ್ ಬೇಕಲ್ ಹಾಗೂ ಸಂಧ್ಯಾರಾಣಿ ಟೀಚರ್ ಅವರ ಸಾರಥ್ಯದಲ್ಲಿ ನಡೆಯಲಿರುವ ಈ ಸಮ್ಮೇಳನದಲ್ಲಿ ಕರ್ನಾಟಕದ ವಿವಿಧ ಭಾಗಗಳಿಂದ ಹಲವು ಸಾಂಸ್ಕೃತಿಕ ಕಲಾತಂಡಗಳು, ಕನ್ನಡ ಪರ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಕನ್ನಡ ಮುಖಂಡರು ಭಾಗವಹಿಸಲಿದ್ದಾರೆ.

ಸಮ್ಮೇಳನದಲ್ಲಿ ಸುಮಾರು 50 ವಿವಿಧ ಸಂಘಟನೆಗಳ ರೂವಾರಿಗಳಿಗೆ ಹಾಗೂ 50 ಮಂದಿ ಕನ್ನಡ ಸಾಹಿತಿಗಳು, ಕವಿಗಳು ಮತ್ತು ವಿದ್ವಾಂಸರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಜೊತೆಗೆ ಕರ್ನಾಟಕದ ವೈವಿಧ್ಯಮಯ ಸಾಂಸ್ಕೃತಿಕ ಕಲಾ ಸಂಪತ್ತಿನ ಪ್ರದರ್ಶನ, ಕನ್ನಡ ಮೆರವಣಿಗೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸಂಸ್ಥಾಪಕರಾದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿಯನ್ನು ಸರ್ವಾಧ್ಯಕ್ಷರಾದ ಡಾ. ಸಿ. ಸೋಮಶೇಖರ್ ಅವರಿಗೆ ಗಡಿನಾಡು ಕನ್ನಡ ಜನತೆಯ ಪರವಾಗಿ ಕನ್ನಡ ಭವನದಿಂದ ಪ್ರದಾನಿಸಿ ಗೌರವಿಸಲಾಗುವುದು.

ಸಮ್ಮೇಳನದಲ್ಲಿ ಶ್ರೀಮದ್ ಎಡನೀರು ಮಠದ ಅಧೀಶರಾದ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಶ್ರೀ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಲಿದ್ದಾರೆ.

ಈ ಕುರಿತು ಸಮ್ಮೇಳನ ಸಮಿತಿ ಅಧ್ಯಕ್ಷ ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ ಹಾಗೂ ಕನ್ನಡ ಭವನದ ಸ್ಥಾಪಕ ಅಧ್ಯಕ್ಷ ಡಾ. ವಾಮನ್ ರಾವ್ ಬೇಕಲ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!