ಮಂಜೇಶ್ವರ: ಉದ್ಯಾವರ ಮಾಡದಲ್ಲಿರುವ ಶ್ರೀ ಅರಸು ಕೃಪಾ ವೀರ ಮಾರುತಿ ವ್ಯಾಯಾಮ ಶಾಲೆಯ ಕಾಣಿಕೆ ಡಬ್ಬಿಯನ್ನು ಕಳ್ಳತನ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.


ಇಂದು ಶನಿವಾರ ಸಂಜೆ ನಡೆಯಲಿರುವ ವಿಶೇಷ ಪೂಜೆಯ ಸಿದ್ಧತೆಗಾಗಿ ವ್ಯಾಯಾಮ ಶಾಲೆಯ ಪದಾಧಿಕಾರಿಯೊಬ್ಬರು ಇಂದು ನಸುಕಿನ ಜಾವ 5 ಗಂಟೆಗೆ ಸ್ಥಳಕ್ಕೆ ಆಗಮಿಸಿದಾಗ ಕಳವು ನಡೆದ ವಿಷಯ ಬೆಳಕಿಗೆ ಬಂದಿದೆ. ದುಷ್ಕರ್ಮಿಯು ವ್ಯಾಯಾಮ ಶಾಲೆಯ ಬಾಗಿಲನ್ನು ಮುರಿದು ಒಳನುಗ್ಗಿ, ಕಾಣಿಕೆ ಡಬ್ಬಿಯನ್ನು ದೋಚಿದ್ದಾನೆ. ಬಳಿಕ ಹಣವನ್ನು ದೋಚಿದ ಕಳ್ಳ, ಖಾಲಿ ಡಬ್ಬಿಯನ್ನು ವ್ಯಾಯಾಮ ಶಾಲೆಯ ಮುಂಭಾಗದ ಪೊದೆಯಲ್ಲಿ ಎಸೆದು ಪರಾರಿಯಾಗಿದ್ದಾನೆ.


ಈ ಘಟನೆಗೆ ಸಂಬಂಧಿಸಿದಂತೆ ವ್ಯಾಯಾಮ ಶಾಲೆಯ ಅಧ್ಯಕ್ಷರಾದ ಸದಾನಂದ ಹತ್ತನೇ ಮೈಲು ಅವರು ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಸಮೀಪದ ಸಿಸಿಟಿವಿ ಕ್ಯಾಮೆರಾವನ್ನು ಪರಿಶೀಲಿಸಿದಾಗ, ವ್ಯಕ್ತಿಯೊಬ್ಬ ಬಾಗಿಲು ಮುರಿದು ಕಳವುಗೈದು ಹೋಗುವ ದೃಶ್ಯ ಸ್ಪಷ್ಟವಾಗಿ ಸೆರೆಯಾಗಿದೆ. ಈ ಸಾಕ್ಷ್ಯವನ್ನು ಆಧರಿಸಿ ಆರೋಪಿಯನ್ನು ಪತ್ತೆಹಚ್ಚಲು ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.


