ಅಲ್ ಜುಬೈಲ್ (ಸೌದಿ ಅರೇಬಿಯಾ), ಜುಲೈ 2026: ಸೌದಿ ಅರೇಬಿಯಾದಲ್ಲಿ ನೆಲೆಸಿರುವ ಭಾರತೀಯ ಸಮುದಾಯಕ್ಕೆ ಹೆಮ್ಮೆಯ ಕ್ಷಣವೊಂದನ್ನು ಕನ್ನಡಿಗ ವಿದ್ಯಾರ್ಥಿ ಮೊಹಮ್ಮದ್ ಆಯಾನ್ ಯೂಸುಫ್ ಕೊಳ್ನಾಡು ನಿರ್ಮಿಸಿದ್ದಾರೆ.

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಜುಲೈ 16ರಂದು ಪ್ರಕಟಿಸಿದ ಪರಿಷ್ಕೃತ NEET UG–2026 ಫಲಿತಾಂಶದಲ್ಲಿ ಆಯಾನ್ 99.9253 ಪರ್ಸೆಂಟೈಲ್ ಅಂಕ ಗಳಿಸಿ, ವಿದೇಶಿ ವಿಭಾಗದ ರಾಜ್ಯವಾರು ಪ್ರಥಮ ಸ್ಥಾನ ಪಡೆದು ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಪೈಕಿ ಅತ್ಯುತ್ತಮ ಸಾಧಕರಾಗಿ ಗುರುತಿಸಿಕೊಂಡಿದ್ದಾರೆ.
ಆಯಾನ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಕೊಳ್ನಾಡು ಗ್ರಾಮ ಮೂಲದ ಅಬ್ದುಲ್ ಸಮದ್ ಕೊಳ್ನಾಡು ಹಾಗೂ ನುಸೈಬಾ ಚೂರಿ ಅಬ್ದುಲ್ಲಾ ಅವರ ಪುತ್ರ.
ನೀಟ್‌ನ ಈ ಸಾಧನೆ ಅವರ ಶೈಕ್ಷಣಿಕ ಪಯಣದ ಮತ್ತೊಂದು ಮಹತ್ವದ ಮೈಲಿಗಲ್ಲಾಗಿದೆ. ಈ ವರ್ಷದ ಆರಂಭದಲ್ಲಿ ಅಲ್ ಜುಬೈಲ್‌ನ ಇಂಟರ್‌ನ್ಯಾಷನಲ್ ಇಂಡಿಯನ್ ಸ್ಕೂಲ್ (IISJ) ನಲ್ಲಿ ನಡೆದ ಸಿಬಿಎಸ್‌ಇ ದ್ವಿತೀಯ ಪಿಯುಸಿ (12ನೇ ತರಗತಿ) ವಿಜ್ಞಾನ ವಿಭಾಗದ ಪರೀಕ್ಷೆಯಲ್ಲಿ 500ಕ್ಕೆ 485 ಅಂಕ (97%) ಗಳಿಸಿ ಶಾಲೆಯ ಪ್ರಥಮ ವಿದ್ಯಾರ್ಥಿಯಾಗಿ ಹೊರಹೊಮ್ಮಿದ್ದರು. ಇದಕ್ಕೂ ಮುನ್ನ 10ನೇ ತರಗತಿಯಲ್ಲಿಯೂ ಮುಖ್ಯ ವಿಷಯಗಳಲ್ಲಿ 98% ಅಂಕ ಗಳಿಸಿ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ್ದರು.

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿಯೂ ಆಯಾನ್ ನಿರಂತರ ಸಾಧನೆ ಮಾಡಿದ್ದಾರೆ. 2025ರಲ್ಲಿ ALLEN Overseas TALLENTEX ಪ್ರತಿಭಾ ಪರೀಕ್ಷೆಯಲ್ಲಿ ಸೌದಿ ಅರೇಬಿಯಾ ಮಟ್ಟದಲ್ಲಿ ಪ್ರಥಮ ರ‍್ಯಾಂಕ್ ಪಡೆದು ತಮ್ಮ ಅಸಾಧಾರಣ ಸಾಮರ್ಥ್ಯವನ್ನು ಪ್ರದರ್ಶಿಸಿದ್ದರು.
ಅವರ ಪ್ರತಿಭೆ ಬಾಲ್ಯದಲ್ಲೇ ಅನಾವರಣಗೊಂಡಿತ್ತು. 2019ರಲ್ಲಿ ಪುತ್ತೂರಿನ ಸುದಾನ ರೆಸಿಡೆನ್ಷಿಯಲ್ ಸ್ಕೂಲ್ ನಲ್ಲಿ ವ್ಯಾಸಂಗ ಮಾಡುತ್ತಿದ್ದ ವೇಳೆ ನಡೆದ Indian National Spell Bee ಸ್ಪರ್ಧೆಯಲ್ಲಿ ದೇಶ ಮಟ್ಟದಲ್ಲಿ 6ನೇ ರ‍್ಯಾಂಕ್ ಗಳಿಸಿ ಗಮನ ಸೆಳೆದಿದ್ದರು.

ಆಯಾನ್ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು IIS ಅಲ್ ಜುಬೈಲ್ ಹಾಗೂ ಸುದಾನ ರೆಸಿಡೆನ್ಷಿಯಲ್ ಸ್ಕೂಲ್, ಪುತ್ತೂರು ನಲ್ಲಿ ಪೂರ್ಣಗೊಳಿಸಿದ್ದು, ಪ್ರೌಢಶಾಲೆ ಹಾಗೂ ಪಿಯುಸಿ ಶಿಕ್ಷಣವನ್ನು ಇಂಟರ್‌ನ್ಯಾಷನಲ್ ಇಂಡಿಯನ್ ಸ್ಕೂಲ್, ಅಲ್ ಜುಬೈಲ್ ನಲ್ಲಿ ಪಡೆದಿದ್ದಾರೆ. ಅವರ ಈ ಯಶಸ್ಸಿನ ಹಿಂದೆ ಶಾಲೆಯ ಶಿಕ್ಷಕರು, ALLEN Overseas ತರಬೇತಿ ತಂಡದ ಮಾರ್ಗದರ್ಶನ, ಪೋಷಕರ ನಿರಂತರ ಪ್ರೋತ್ಸಾಹ ಹಾಗೂ ಸರ್ವಶಕ್ತನಾದ ದೇವನ ಅನುಗ್ರಹ ಎಂದು ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ.

ವರ್ಷಗಳ ಪರಿಶ್ರಮ, ಶಿಸ್ತು, ಆತ್ಮವಿಶ್ವಾಸ ಮತ್ತು ದೃಢ ಸಂಕಲ್ಪದಿಂದ ಸಾಧನೆಯ ಶಿಖರ ತಲುಪಿರುವ ಆಯಾನ್ ಯೂಸುಫ್ ಅವರ ಯಶೋಗಾಥೆ ದೇಶ-ವಿದೇಶಗಳಲ್ಲಿರುವ ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕವಾಗಿದೆ.

ಅವಕಾಶ ಎಲ್ಲಿದ್ದರೂ ಗುರಿ ಸ್ಪಷ್ಟವಾಗಿದ್ದರೆ ಯಶಸ್ಸು ಖಚಿತ ಎಂಬುದನ್ನು ಅವರ ಸಾಧನೆ ಮತ್ತೊಮ್ಮೆ ಸಾಬೀತುಪಡಿಸಿದೆ.
ಮುಂದಿನ ಉನ್ನತ ಶಿಕ್ಷಣದ ಪಯಣಕ್ಕೆ ಕಾಲಿಡುತ್ತಿರುವ ಆಯಾನ್ ಅವರಿಗೆ ಭಾರತೀಯ ಸಮುದಾಯ ಹಾಗೂ ಕನ್ನಡಿಗರು ಶುಭ ಹಾರೈಸಿದ್ದು, ಭವಿಷ್ಯದಲ್ಲೂ ಇನ್ನಷ್ಟು ಸಾಧನೆಗಳನ್ನು ಮಾಡುವಂತೆ ಆಶಿಸಿದ್ದಾರೆ.


