ಮಂಜೇಶ್ವರ : ಶಾಲಾ ಆವರಣದ ಸೌಹಾರ್ದತೆಯ ನಡುವೆ ಭಯದ ಬೀಜ ಬಿತ್ತಿ ರ್ಯಾಗಿಂಗ್ ರಾಕ್ಷಸನಂತೆ ಬೆಳೆಯುತ್ತಿದ್ದರೆ, ಶಿಕ್ಷಣ ಸಂಸ್ಥೆಗಳ ಸುರಕ್ಷತೆಯೇ ಪ್ರಶ್ನೆಯಾಗುತ್ತಿದೆ. ಕೇವಲ ಕಾಲೇಜುಗಳಲ್ಲಿ ಮಾತ್ರ ಕೇಳಿಬರುತ್ತಿದ್ದ ಹಿಂಸಾಚಾರದ ಪ್ರಕರಣಗಳು ಇಂದು ಹೈಯರ್ ಸೆಕೆಂಡರಿ ಹಾಗೂ ಅದಕ್ಕಿಂತ ಕೆಳಗಿನ ಶಾಲಾ ಹಂತಗಳಿಗೂ ವ್ಯಾಪಿಸುತ್ತಿರುವುದು ಆತಂಕಕಾರಿ ಸತ್ಯವಾಗಿದೆ.

ಮಂಜೇಶ್ವರದ ಬೇಕೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಪ್ಲಸ್ ಒನ್ ವಿದ್ಯಾರ್ಥಿಗಳ ಮೇಲೆ ನಡೆದ ಕ್ರೂರ ಹಲ್ಲೆ ಇದಕ್ಕೆ ಇತ್ತೀಚಿನ ಉದಾಹರಣೆಯಾಗಿದೆ. ಹಿರಿಯ ವಿದ್ಯಾರ್ಥಿಗಳ ಮಸಲತ್ತಿನಿಂದ ಐದು ಮಂದಿ ನವಪಟುಗಳು ಆಸ್ಪತ್ರೆ ಸೇರಿದ್ದು, 14 ಜನರ ವಿರುದ್ಧ ಮಂಜೇಶ್ವರ ಪೊಲೀಸ್ ದೂರು ದಾಖಲಾಗಿರುವ ಘಟನೆಯು ಶಾಲೆಗಳಲ್ಲಿ ಬೆಳೆಯುತ್ತಿರುವ ಇಂತಹ ಪ್ರವೃತ್ತಿಗಳ ಭೀಕರತೆಯನ್ನು ಬಿಂಬಿಸುತ್ತದೆ.
ಹಿಂದಿನ ಕಾಲದಲ್ಲಿ ಕೇವಲ ಪರಿಚಯ ಮಾಡಿಕೊಳ್ಳುವ ಅಥವಾ ಮುಗ್ಧ ತಮಾಷೆಯಾಗಿದ್ದ ರ್ಯಾಗಿಂಗ್, ಇಂದು ದೈಹಿಕ ಮತ್ತು ಮಾನಸಿಕ ಕಿರುಕುಳವಾಗಿ ಬದಲಾಗಿದೆ.

ಕಿರಿಯ ವಿದ್ಯಾರ್ಥಿಗಳನ್ನು ಹೆದರಿಸಿ ತಮ್ಮ ಹತೋಟಿಯಲ್ಲಿಟ್ಟುಕೊಳ್ಳಬೇಕೆಂಬ ತಪ್ಪು ಆಲೋಚನೆಯೇ ಇಂತಹ ದೌರ್ಜನ್ಯಗಳಿಗೆ ಮೂಲ ಕಾರಣ. ಕ್ಯಾಂಪಸ್ ಹಿಂಸಾಚಾರವನ್ನು ಸಾಹಸ ಎಂದು ವೈಭವೀಕರಿಸುವ ಟ್ರೆಂಡ್ಗಳು ವಿದ್ಯಾರ್ಥಿಗಳಿಗೆ ತಪ್ಪು ಸಂದೇಶ ನೀಡುತ್ತಿವೆ.
ಶಾಲಾ ಪರಿಸರದಲ್ಲಿ ಹೆಚ್ಚುತ್ತಿರುವ ಮಾದಕದ್ರವ್ಯ ಬಳಕೆಯು ಹದಿಹರೆಯದವರಲ್ಲಿ ಹಿಂಸಾತ್ಮಕ ಮನೋಭಾವ ಹೆಚ್ಚಲು ಕುಮ್ಮಕ್ಕು ನೀಡುತ್ತಿದೆ.
ಕೇವಲ ತಮಾಷೆಗೋ ಅಥವಾ ಗೆಳೆಯರ ಮುಂದೆ ಗತ್ತು ತೋರಿಸಲೋ ಮಾಡುವ ಇಂತಹ ಕೃತ್ಯಗಳು ವಿದ್ಯಾರ್ಥಿಗಳ ಭವಿಷ್ಯವನ್ನೇ ಹಾಳುಮಾಡುತ್ತಿವೆ. ರ್ಯಾಗಿಂಗ್ ನಿರೋಧಕ ಕಾಯ್ದೆಗಳು ಬಿಗಿಯಾಗಿರುವುದರಿಂದ, ಪ್ರಕರಣಗಳಲ್ಲಿ ಸಿಲುಕಿಕೊಳ್ಳುವ ಆರೋಪಿಗಳ ಶಿಕ್ಷಣ ಮತ್ತು ಭವಿಷ್ಯದ ಉದ್ಯೋಗಾವಕಾಶಗಳು ಶಾಶ್ವತವಾಗಿ ನೆಲಕಚ್ಚುತ್ತವೆ. ಜೊತೆಗೆ, ಸಂತ್ರಸ್ತ ಮಕ್ಕಳು ಎದುರಿಸುವ ಮಾನಸಿಕ ಆಘಾತವು ಅವರ ಕಲಿವು ಮತ್ತು ಆತ್ಮವಿಶ್ವಾಸದ ಮೇಲೆ ಜೀವನಪರ್ಯಂತ ಕೆಟ್ಟ ಪರಿಣಾಮ ಬೀರುತ್ತದೆ.

ರ್ಯಾಗಿಂಗ್ನಂತಹ ಅನಿಷ್ಟ ಪ್ರವೃತ್ತಿಗಳನ್ನು ಶಾಲಾ ಹಂತದಲ್ಲೇ ತಡೆಯಲು ಆಡಳಿತ ಮಂಡಳಿ ಹಾಗೂ ಅಧಿಕಾರಿಗಳು ಜಾಗೃತರಾಗಬೇಕಿದೆ.
ವಿದ್ಯಾ ದೇಗುಲಗಳು ಭಯದ ಕೇಂದ್ರಗಳಾಗಲು ಎಂದಿಗೂ ಬಿಡಬಾರದು. ಬೇಕೂರು ಶಾಲೆಯಲ್ಲಿ ನಡೆದ ಘಟನೆಯು ನಮಗೆಲ್ಲರಿಗೂ ಒಂದು ಎಚ್ಚರಿಕೆಯ ಗಂಟೆಯಾಗಿದೆ; ಸೌಹಾರ್ದತೆ ಮತ್ತು ಅರಿವಿನ ತಾಣಗಳಿಗೆ ಹಿಂಸೆಯ ಕರಿನೆರಳು ಚಾಚದಂತೆ ಸಮಾಜ ಮತ್ತು ಆಡಳಿತ ವ್ಯವಸ್ಥೆ ಒಟ್ಟಾಗಿ ಜಾಗ್ರತೆ ವಹಿಸಬೇಕಿದೆ.

