ತುಮಕೂರು ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿ ಸನ್ನಿಧಾನದಲ್ಲಿ ಕಾಸರಗೋಡಿನ ಯಕ್ಷಗಾನ ಬೊಂಬೆಯಾಟ

ಕಾಸರಗೋಡು: ಧರ್ಮ ಸಂಸ್ಕೃತಿಯ ನೆಲೆವೀಡಾದ ತುಮಕೂರು ಶ್ರೀ ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿ ಸನ್ನಿಧಿಗೆ ತೆಂಕುತಿಟ್ಟು ಯಕ್ಷಗಾನ ಸೂತ್ರದ ಬೊಂಬೆಗಳ ಯಶಸ್ವೀ ನಡಿಗೆ ಇತಿಹಾಸವನ್ನು ಸೃಷ್ಟಿಸಿತು. ಕಾಸರಗೋಡಿನ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘದ ‘ಗಣ್ಯರೆಡೆಗೆ ಬೊಂಬೆ ನಡಿಗೆ’ ಅಭಿಯಾನ ಸಿದ್ಧಗಂಗಾ ಮಠ ಮತ್ತು ಅಲ್ಲಿನ ಶ್ರೀ ಬಸವೇಶ್ವರ ಹೈಯರ್ ಪ್ರೆಮರಿ ಶಾಲೆಯಲ್ಲಿ ಜರಗಿತು.

ನಾಡೋಜ ಕಯ್ಯಾರರ ನಾಡಿನಿಂದ ಬಂದ ತೆಂಕುತಿಟ್ಟಿನ ಯಕ್ಷಗಾನ ಬೊಂಬೆಯಾಟ ಸಂಘವು ಈ ಪರಂಪರಾಗತ ಕಲೆಯನ್ನು ಉಳಿಸುವ ಮತ್ತು ಮುಂದಿನ ತಲೆಮಾರಿಗೆ ಹಸ್ತಾಂತರಿಸುವ ನಿಟ್ಟಿನಲ್ಲಿ ಪ್ರದರ್ಶನ , ಪ್ರಾತ್ಯಕ್ಷಿಕೆಗಳ ಮೂಲಕ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿರುವುದು ಸ್ತುತ್ಯರ್ಹವೆಂದು ಆಶೀರ್ವಚನ ಮಾಡಿದ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿ ಹೇಳಿದರು.

ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘದ ನಿರ್ದೇಶಕ ಹಾಗೂ ಪ್ರಧಾನ ಸೂತ್ರದಾರ ಕೆ. ವಿ. ರಮೇಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ತೆಂಕುತಿಟ್ಟು ಯಕ್ಷಗಾನದ ಪರಂಪರಾಗತ ಮೌಲ್ಯಗಳಿಗೆ ಕಾಯಕಲ್ಪ ನೀಡುವ ನಿಟ್ಟಿನಲ್ಲಿ ಯಕ್ಷಗಾನ ವಾಲ್ಮೀಕಿ ಕುಂಬಳೆ ಪಾರ್ತಿಸುಬ್ಬನ ವಂಶಜರಿAದ ಅಸ್ತಿತ್ವಕ್ಕೆ ಬಂದ ಸಂಸ್ಥೆಯು ಸುವರ್ಣ ಸಂಭ್ರಮದಲ್ಲಿದ್ದು ಅದರ ಪೂರ್ವಭಾವಿಯಾಗಿ ಈ ಅಭಿಯಾನವನ್ನು ಹಮ್ಮಿಕೊಂಡಿದೆ ಎಂದು ಅವರು ಹೇಳಿದರು.

‘ನರಕಾಸುರ ವಧೆ’ ಯಕ್ಷಗಾನ ಸೂತ್ರದ ಬೊಂಬೆಯಾಟ ಪ್ರದರ್ಶನಗೊಂಡಿತು. ಕೆ. ವಿ. ರಮೇಶ್ ಅವರೊಂದಿಗೆ ಸಹಸೂತ್ರದಾರಿಗಳಾಗಿ ಕೆ. ವಿ. ತಿರುಮಲೇಶ್, ಕೆ. ವಿ. ಸುದರ್ಶನ, ಮನೋರಮ ಎಡನೀರು, ಅಚಲ್ ರಾವ್ ಮರ್ದಂಬೈಲು ಸಹಕರಿಸಿದರು. ಪ್ರದರ್ಶನವನ್ನು ಪೂರ್ತಿ ವೀಕ್ಷಿಸಿದ ಸಿದ್ಧಲಿಂಗ ಮಹಾಸ್ವಾಮಿಗಳು ಕಲಾವಿದರನ್ನು ಸನ್ಮಾನಿಸಿ ಹರಸಿದರು. ಕಾಸರಗೋಡಿನ ಪ್ರಥಮ ಆಕರ ಗ್ರಂಥವಾದ ‘ಮಧುಪುರ’ವನ್ನು ಪೂಜ್ಯ ಸ್ವಾಮೀಜಿಯವರಿಗೆ ನೀಡಲಾಯಿತು. ಶ್ರೀ ಸಿದ್ಧಲಿಂಗೇಶ್ವರ ವೇದ-ಸಂಸ್ಕೃತ ಮಹಾಪಾಠಶಾಲೆಯ ಸಂಸ್ಕೃತ ಪ್ರಾಧ್ಯಾಪಕ ಗುರುಪ್ರಸಾದ್ ಕಾರ್ಯಕ್ರಮ ಆಯೋಜಿಸುವಲ್ಲಿ ಪ್ರಧಾನ ಪಾತ್ರ ವಹಿಸಿದ್ದರು.

ಬಳಿಕ ಶ್ರೀ ಬಸವೇಶ್ವರ ಹೈಯರ್ ಪ್ರೆಮರಿ ಶಾಲೆಯಲ್ಲೂ ಬೊಂಬೆಯಾಟ ಆಯೋಜಿಸಲಾಗಿತ್ತು. ಸಹಸ್ರಾರು ವಿದ್ಯಾರ್ಥಿಗಳು ಬೊಂಬೆಯಾಟವನ್ನು ವೀಕ್ಷಿಸಿ ಈ ಅದ್ಭುತ ಕಲಾ ಮಾಧ್ಯಮವನ್ನು ಬೆರಗಿನಿಂದ ನೋಡಿದರು. ಮುಖ್ಯೋಪಾಧ್ಯಾಯಿನಿ ರೂಪಶ್ರೀಯವರು ಕಲಾವಿದರನ್ನು ಸನ್ಮಾನಿಸಿದರು. ವಿದ್ಯಾರ್ಥಿನಿ ಹಾನ್ಸಿ ಕಾರ್ಯಕ್ರಮ ನಿರೂಪಿಸಿದರು.

SHARE
Loading spinner

One thought on “ತುಮಕೂರು ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿ ಸನ್ನಿಧಾನದಲ್ಲಿ ಕಾಸರಗೋಡಿನ ಯಕ್ಷಗಾನ ಬೊಂಬೆಯಾಟ

Leave a Reply

Your email address will not be published. Required fields are marked *

error: Content is protected !!