​ಕಾಸರಗೋಡಿನಲ್ಲಿ ತಿರುವೋಣಂ ಬಂಪರ್ ಲಾಟರಿ ಟಿಕೆಟ್‌ಗೆ ಭಾರೀ ಬೇಡಿಕೆ: 30 ಕೋಟಿ ರೂ. ಮೊದಲ ಬಹುಮಾನ

​ಕಾಸರಗೋಡು : ತಿರುವೋಣಂ ಬಂಪರ್ ಲಾಟರಿ ಟಿಕೆಟ್‌ಗಳನ್ನು ಖರೀದಿಸಲು ಜನರ ನೂಕುನುಗ್ಗಲು ಹೆಚ್ಚಾಗುತ್ತಿದೆ. ಕೇರಳ ಸರ್ಕಾರವು ತನ್ನ ಇತಿಹಾಸದಲ್ಲೇ ಮೊದಲ ಬಾರಿಗೆ ಅತ್ಯಂತ ದೊಡ್ಡ ಮೊತ್ತದ 30 ಕೋಟಿ ರೂಪಾಯಿಗಳ ತಿರುವೋಣಂ ಬಂಪರ್ ಲಾಟರಿಯನ್ನು ಈ ವರ್ಷ ಮಾರುಕಟ್ಟೆಗೆ ತಂದಿದೆ. ಹಿಂದೆ 6 ಕೋಟಿ, ನಂತರ 10 ಕೋಟಿ ಹಾಗೂ 25 ಕೋಟಿ ರೂಪಾಯಿಗಳ ಬಂಪರ್ ಲಾಟರಿಗಳು ಲಭ್ಯವಿದ್ದವು.

​ಈ ತಿಂಗಳ 26 ರಂದು ಓಣಂ ಬಂಪರ್ ಲಾಟರಿಯ ಡ್ರಾ (ನಿಕಾಲ್) ನಡೆಯಲಿದೆ. ದಿನಾಂಕ ಹತ್ತಿರವಾಗುತ್ತಿದ್ದಂತೆ ಕಾಸರಗೋಡಿನ ಹಲವು ಲಾಟರಿ ಮಳಿಗೆಗಳಲ್ಲಿ ಬೆಳಿಗ್ಗೆಯಿಂದ ರಾತ್ರಿ 11 ಗಂಟೆಯವರೆಗೆ ಭಾರೀ ಜನಜಂಗುಳಿ ಕಂಡುಬರುತ್ತಿರುವುದಾಗಿ ಲಾಟರಿ ಮಾಲಿಕರು ಹೇಳುತಿದ್ದಾರೆ.

ಅಂತಿಮ ಮೂರು ದಿನಗಳಲ್ಲಿ ಬೆಳಗಿನ ಜಾವದವರೆಗೂ ಟಿಕೆಟ್ ಖರೀದಿಸಲು ಜನರು ಬರುತ್ತಾರೆ ಎಂದು ವ್ಯಾಪಾರಿಗಳು ನಿರೀಕ್ಷಿಸುತ್ತಿದ್ದಾರೆ.

ಅಂಗಡಿಗಳಿಂದ ಟಿಕೆಟ್ ಖರೀದಿಸಿ ಬಸ್ ನಿಲ್ದಾಣ ಹಾಗೂ ಮಾರುಕಟ್ಟೆಗಳಲ್ಲಿ ಸಂಚರಿಸಿ ಮಾರಾಟ ಮಾಡುವವರ ಸಂಖ್ಯೆಯೂ ಹೆಚ್ಚಾಗಿದ್ದು, ಅವರು ದಿನವಿಡೀ ಬಿರುಸಿನ ಮಾರಾಟದಲ್ಲಿದ್ದಾರೆ. ಜನಸಂದಣಿ ಹೆಚ್ಚಾದ ಕಾರಣ ಲಾಟರಿ ಕಳ್ಳರ ಕಾಟವೂ ಹೆಚ್ಚಾಗಿದ್ದು,

ರಕ್ಷಣೆಗಾಗಿ ಹಲವು ವ್ಯಾಪಾರಿಗಳು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ.
​​ಟಿಕೆಟ್ ಬೆಲೆ: 500
​ಒಂದನೇ ಬಹುಮಾನ: ರೂ.30 ಕೋಟಿ
​ಎರಡನೇ ಬಹುಮಾನ: ರೂ.1 ಕೋಟಿ (20 ಜನರಿಗೆ)
​ಮೂರನೇ ಬಹುಮಾನ: ರೂ.25 ಲಕ್ಷ (20 ಜನರಿಗೆ)
​ನಾಲ್ಕನೇ ಬಹುಮಾನ: ರೂ.5 ಲಕ್ಷ (10 ಜನರಿಗೆ)
​ಇದಲ್ಲದೆ ರೂ .5000, ರೂ.2000, ರೂ.1000 ಸೇರಿದಂತೆ ಹಲವು ಸಣ್ಣ ಬಹುಮಾನಗಳೂ ಇವೆ.

​ಹಲವರು ಸ್ನೇಹಿತರೊಂದಿಗೆ ಸೇರಿಕೊಂಡು ಫ್ಯಾನ್ಸಿ ಸಂಖ್ಯೆಯ ಟಿಕೆಟ್‌ಗಳನ್ನು ಆಯ್ಕೆ ಮಾಡಿ ರೂ.10,000 ದಿಂದ ರೂ.50,000 ಮೌಲ್ಯದವರೆಗೂ ಟಿಕೆಟ್‌ಗಳನ್ನು ಖರೀದಿಸುತ್ತಿದ್ದಾರೆ.

ಹೊರರಾಜ್ಯದ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಕೆಲವರು ದಿನಕ್ಕೆ 2 ರಿಂದ 5 ಟಿಕೆಟ್‌ಗಳವರೆಗೆ ಖರೀದಿಸುತ್ತಿದ್ದಾರೆ.
​ಹಿಂದೆ ಹಲವು ಬಾರಿ 2ನೇ ಮತ್ತು 3ನೇ ಬಹುಮಾನಗಳನ್ನು ತಂದುಕೊಟ್ಟಿರುವ ಕಾಸರಗೋಡಿನ ಕೆಲವೊಂದು ಲಾಟರಿ ಅಂಗಡಿಗಳಲ್ಲಿ ಗ್ರಾಹಕರ ಹರಿವು ಹೆಚ್ಚಾಗಿದೆ.

ಈ ಬಾರಿಯ 30 ಕೋಟಿಯ ಮೊದಲ ಬಹುಮಾನ ಕಾಸರಗೋಡು ಜಿಲ್ಲೆಯ ಅದೃಷ್ಟಶಾಲಿಗೆ ಸಿಗಲಿದೆ ಎಂಬ ಭರವಸೆಯಲ್ಲಿ ಸ್ಥಳೀಯ ಲಾಟರಿ ವ್ಯಾಪಾರಿಗಳಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!