ಕಾಸರಗೋಡು: ದಕ್ಷಿಣ ಕನ್ನಡ ಜಿಲ್ಲೆಯ ಖ್ಯಾತ ಸಾಹಿತಿ ಹಾಗೂ ಕವಿ ಸತ್ಯವತಿ ಭಟ್ ಕೊಳಚಪ್ಪು ಅವರಿಗೆ ‘ಕಾಸರಗೋಡು ದಸರಾ ಕವಿ ಶ್ರೇಷ್ಠ ರಾಷ್ಟ್ರೀಯ ಪ್ರಶಸ್ತಿ–2026’ ನೀಡಿ ಗೌರವಿಸಲು ಆಯ್ಕೆ ಮಾಡಲಾಗಿದೆ.

ಅಕ್ಟೋಬರ್ 11ರಿಂದ 20ರವರೆಗೆ ಕಾಸರಗೋಡು ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಸುಬ್ರಹ್ಮಣ್ಯ ದೇವಸ್ಥಾನದ ದಸರಾ ವೇದಿಕೆಯಲ್ಲಿ ‘ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ–2026’ ನಡೆಯಲಿದೆ.
ಉತ್ಸವದ ಅಂಗವಾಗಿ ಅಕ್ಟೋಬರ್ 18ರಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿರುವ ಕಾಸರಗೋಡು ದಸರಾ ಕವಿ ಸಮ್ಮೇಳನದಲ್ಲಿ ಸತ್ಯವತಿ ಭಟ್ ಕೊಳಚಪ್ಪು ಅವರಿಗೆ ಕವಿ ಶ್ರೇಷ್ಠ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಸಾಹಿತ್ಯ ಸಂಘಟಕ ಬಿ. ಶ್ರೀನಿವಾಸ್ ಬಹಾದ್ದೂರ್ ಅವರ ಸರ್ವಾಧ್ಯಕ್ಷತೆಯಲ್ಲಿ ಕವಿ ಸಮ್ಮೇಳನ ನಡೆಯಲಿದ್ದು, ಚುಟುಕು ಬ್ರಹ್ಮ ಹಾಗೂ ಚುಟುಕು ಸಾಹಿತ್ಯ ಪರಿಷತ್ ಸಂಸ್ಥಾಪಕ ಡಾ. ಎಂ.ಜಿ.ಆರ್. ಅರಸ್ ಮೈಸೂರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಮೈಸೂರಿನ ಖ್ಯಾತ ಕವಿ, ಸಾಹಿತ್ಯ ರತ್ನ ಜಯಪ್ಪ ಹೊನ್ನಾಳಿ, ‘ಜಯ ಕವಿ ಮೈಸೂರು’, ಅವರ ಅಧ್ಯಕ್ಷತೆಯಲ್ಲಿ ಕಾಸರಗೋಡು ದಸರಾ ಕವಿಗೋಷ್ಠಿ ನಡೆಯಲಿದೆ.

ರಾಷ್ಟ್ರಮಟ್ಟದ ಸುಮಾರು 75 ಮಂದಿ ಕವಿಗಳು ಭಾಗವಹಿಸಲಿರುವ ಈ ಕವಿ ಸಮ್ಮೇಳನದಲ್ಲಿ ಒಟ್ಟು 21 ಮಂದಿ ಕವಿಶ್ರೇಷ್ಠರಿಗೆ ‘ಕಾಸರಗೋಡು ದಸರಾ ಕವಿ ಶ್ರೇಷ್ಠ ರಾಷ್ಟ್ರೀಯ ಪ್ರಶಸ್ತಿ–2026’ ನೀಡಿ ಗೌರವಿಸಲಾಗುತ್ತಿದೆ.
ಕಾಸರಗೋಡು ದಸರಾ ಸಂಚಾಲಕರೂ, ಕನ್ನಡ ಭವನದ ಸ್ಥಾಪಕ ಅಧ್ಯಕ್ಷರೂ ಆದ ಡಾ. ವಾಮನ್ ರಾವ್ ಬೇಕಲ್ ಹಾಗೂ ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಸುಬ್ರಹ್ಮಣ್ಯ ದೇವಸ್ಥಾನದ ಸಾಂಸ್ಕೃತಿಕ ಘಟಕದ ಅಧ್ಯಕ್ಷ ಪಾಂಗೋಡು ಪ್ರವೀಣ್ ನಾಯಕ್ ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ಈ ಮಾಹಿತಿ ತಿಳಿಸಿದ್ದಾರೆ.
ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆಗಾಗಿ ಸತ್ಯವತಿ ಭಟ್ ಕೊಳಚಪ್ಪು ಅವರಿಗೆ ದೊರೆಯುತ್ತಿರುವ ಈ ರಾಷ್ಟ್ರೀಯ ಗೌರವಕ್ಕೆ ಸಾಹಿತ್ಯಾಸಕ್ತರಿಂದ ಅಭಿನಂದನೆಗಳು ವ್ಯಕ್ತವಾಗುತ್ತಿವೆ.

