ಕಾಸರಗೋಡು: ಬಾಳೆಮೂಲೆಯ ಬಸ್ ತಂಗುದಾಣವೊಂದರಲ್ಲಿ ಸ್ಥಳೀಯ ನಿವಾಸಿ ದಯಾನಂದ (45) ಎಂಬವರ ಶವ ಶಂಕಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ.

ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ಇವರು, ಕಳೆದ ಒಂದು ವರ್ಷದಿಂದ ಈಶ್ವರಮಂಗಲದಲ್ಲಿದ್ದ ಸಹೋದರಿ ಗೀತಾ ಮನೆಯಲ್ಲಿದ್ದರು. ಮೂರು ವಾರಗಳ ಹಿಂದೆಯಷ್ಟೇ ಬಾಳೆಮೂಲೆಗೆ ಮರಳಿದ್ದ ದಯಾನಂದ ಸಂಜೆ ಬಸ್ ತಂಗುದಾಣದಲ್ಲಿ ಶವವಾಗಿ ಬಿದ್ದಿರುವುದನ್ನು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ. ಘಟನೆಗೆ ಸಂಬಂಧಿಸಿ ಪೊಲೀಸರು ವಿಸ್ತೃತ ತನಿಖೆ ಕೈಗೆತ್ತಿಕೊಂಡಿದ್ದಾರೆ.

