ಮಂಜೇಶ್ವರ : ಮರಳು ಮಾಫಿಯಾಗಳೊಂದಿಗೆ ನಂಟು ಬೆಳೆಸಿ ಕೊಂಡು ಪೊಲೀಸಿನ ರಹಸ್ಯ ಮಾಹಿತಿಗಳನ್ನು ಸೋರಿಕೆ ಮಾಡಿರುವುದನ್ನು ಪತ್ತೆ ಹಚ್ಚಿ ಕುಂಬಳೆ ಪೊಲೀಸ್ ಠಾಣೆಯ ಐದು ಪೊಲೀಸರನ್ನು ಹಾಗೂ ಇಲ್ಲಿಂದ ವರ್ಗಾವಣೆಗೊಂಡ ಒಂದು ಪೊಲೀಸನನ್ನು ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಯವರ ನಿರ್ದೇಶದಂತೆ ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಕುಂಬಳೆ ಠಾಣೆಯ ಸೀನಿಯರ್ ಸಿವಿಲ್ ಪೊಲೀಸ್ ಅಧಿಕಾರಿ ಅಬ್ದುಲ್ ಸಲಾಂ, ಮನು, ಲಿನೇಶ್, ಅನೂಪ್, ಚಾಲಕ ಕೃಷ್ಣ ಪ್ರಸಾದ್ ಹಾಗೂ ಕುಂಬಳೆ ಠಾಣೆಯಿಂದ ಇತ್ತೀಚೆಗೆ ವರ್ಗಾವಣೆಗೊಂಡ ವಿನೋದ್ ಕುಮಾರ್ ಎಂಬಿವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಒಂದು ತಿಂಗಳ ಹಿಂದೆ ಅನಧಿಕೃತ ಮರಳು ಸಾಗಾಟ ನಡೆಸುತಿದ್ದ ಟಿಪ್ಪರ್ ಲಾರಿಯೊಂದನ್ನು ಕುಂಬಳೆ ಪೊಲೀಸರು ವಶಕ್ಕೆ ತೆಗೆದಿದ್ದರು. ಇದರ ಚಾಲಕನ ಮೊಬೈಲ್ ಫೋನ್ ಪರಿಶೋಧಿಸಿದಾಗ ಈಗ ಅಮಾನತುಗೊಂಡ 6 ಪೊಲೀಸರು ಮರಳು ಮಾಫಿಯಾಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವುದನ್ನು ಪತ್ತೆ ಹಚ್ಚಲಾಗಿತ್ತು.
ವಾಟ್ಸಪ್ ಹಾಗೂ ಮೊಬೈಲ್ ಕರೆ ಮೂಲಕ ಪೋಲೀಸಿನ ರಹಸ್ಯ ಮಾಹಿತಿಗಳನ್ನು ಮರಳು ಮಾಫಿಯಾಗಳಿಗೆ ನೀಡುತ್ತಿರುವುದನ್ನು ಪತ್ತೆ ಹಚ್ಚಲಾಗಿತ್ತು. ಮರಳು ಮಾಫಿಯಾಗಳನ್ನು ಪತ್ತೆ ಹಚ್ಚಲು ರಹಸ್ಯವಾಗಿ ತೆರಳುತಿದ್ದ ದಾರಿ ಅದೇ ರೀತಿಯ ಸಮಯ ಸೇರಿದಂತೆ ಹಲವು ರಹಸ್ಯ ಮಾಹಿತಿಗಳು ಸೋರಿಕೆಯಾಗಿತ್ತು.
ಮರಳು ಮಾಫಿಯಾಗಳ ಅಟ್ಟಹಾಸದ ವಿರುದ್ಧ ಊರವರು ದೂರು ನೀಡಿದರೂ ನೀಡಿದವರ ಮಾಹಿತಿ ಮರಳು ಮಾಫಿಯಾಗಳಿಗೆ ನೀಡಲಾಗುತಿತ್ತು. ಇದೆಲ್ಲಾ ವರದಿಯ ಆಧಾರದಲ್ಲಿ ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.