ಉಪ್ಪಳ: ಅಜ್ಮೀರ್ ಯಾತ್ರೆ ಮುಗಿಸಿ ಕುಟುಂಬದೊಂದಿಗೆ ರೈಲಿನಲ್ಲಿ ಊರಿಗೆ ಮರಳುತ್ತಿದ್ದ ವೇಳೆ ಪೈವಳಿಕೆ ಪಾಕ್ ನಿವಾಸಿ ಮೂಸಕುಂಜಿ (68) ಎಂಬವರು ನಾಪತ್ತೆಯಾಗಿರುವ ಘಟನೆ ನಡೆದಿದೆ. ಕಾರವಾರ ನಿಲ್ದಾಣದವರೆಗೆ ಕುಟುಂಬದವರೊಂದಿಗೆ ಇದ್ದ ಅವರು, ಬಳಿಕ ಅನುಮಾನಾಸ್ಪದವಾಗಿ ರೈಲಿನಿಂದ ಕಾಣೆಯಾಗಿದ್ದಾರೆ. ಈ ಸಂಬಂಧ ಅವರ ಪುತ್ರ ಉಡುಪಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕಳೆದ 26ರಂದು ಏಳು ಸದಸ್ಯರ ಕುಟುಂಬ ಅಜ್ಮೀರ್‌ನಿಂದ ಮಂಗಳೂರು ಕಡೆಗೆ ರೈಲಿನಲ್ಲಿ ಪ್ರಯಾಣ ಆರಂಭಿಸಿತ್ತು. ಸ್ವತಃ ರೈಲಿಗೆ ಏರಿಳಿಯಲೂ ದೈಹಿಕ ತೊಂದರೆ ಹೊಂದಿದ್ದ ಮೂಸಕುಂಜಿ ಅವರು ಕಾಣೆಯಾಗಿರುವುದು ಕುಟುಂಬದವರ ಆತಂಕಕ್ಕೆ ಕಾರಣವಾಗಿದೆ. ಅಲ್ಲದೆ, ಅವರಿಗೆ ಹೃದಯ ಸಂಬಂಧಿ ಕಾಯಿಲೆ (ಮೂರು ಬ್ಲಾಕ್‌ಗಳು) ಇರುವುದರಿಂದ ಪ್ರಕರಣ ಮತ್ತಷ್ಟು ಗಂಭೀರವಾಗಿದೆ.


ಪ್ರಯಾಣದ ವೇಳೆ ರಾತ್ರಿ ಎಲ್ಲರೂ ನಿದ್ರಿಸಿದ್ದ ವೇಳೆ ಈ ಘಟನೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಮಂಗಳೂರು ತಲುಪುವ ಮುನ್ನದ ನಿಲ್ದಾಣದಲ್ಲಿ ಎಚ್ಚರಗೊಂಡ ಕುಟುಂಬದವರು ನೋಡಿದಾಗ ಅವರು ಬೋಗಿಯಲ್ಲಿ ಇರಲಿಲ್ಲ. ಕಾರವಾರ ನಿಲ್ದಾಣದವರೆಗೆ ಅವರು ಜೊತೆಯಲ್ಲೇ ಇದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ. ಬಳಿಕದ ಯಾವುದೋ ನಿಲ್ದಾಣದಲ್ಲಿ ಅಥವಾ ಪ್ರಯಾಣದ ಮಧ್ಯೆ ಅವರು ಕಾಣೆಯಾಗಿರಬಹುದು ಎಂದು ಅಂದಾಜಿಸಲಾಗಿದೆ.

ಕೊನೆಯದಾಗಿ ಕಾಣಿಸಿಕೊಂಡಾಗ ಅವರು ಬಿಳಿ ಶರ್ಟ್ ಹಾಗೂ ಕಪ್ಪು ಪ್ಯಾಂಟ್ ಧರಿಸಿದ್ದರು.ಇವರ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ಸಮೀಪದ ಪೊಲೀಸ್ ಠಾಣೆಗೆ ತಿಳಿಸುವಂತೆ ಕುಟುಂಬದವರು ಮನವಿ ಮಾಡಿದ್ದಾರೆ.

