ಕಾಸರಗೋಡು: ಗೌರವಾನ್ವಿತ ಉಪರಾಷ್ಟ್ರಪತಿ ಹಾಗೂ ಕೇಂದ್ರ ಗೃಹ ಸಚಿವರಿಗೂ ಭದ್ರತೆ ಒದಗಿಸಲು ಸಾಧ್ಯವಾಗದಂತಹ ಸ್ಥಿತಿ ಕೇರಳದ ಆಂತರಿಕ ಭದ್ರತಾ ವ್ಯವಸ್ಥೆಯಲ್ಲಿದೆ. ಬಿಜೆಪಿ ನಾಯಕರು ಹಾಗೂ ಪಕ್ಷದ ರಾಜ್ಯ ಕಚೇರಿಯ ಮೇಲೆ ನಡೆಯುತ್ತಿರುವ ದಾಳಿಗಳು ಆಡಳಿತ ವೈಫಲ್ಯವನ್ನು ಮುಚ್ಚಿಹಾಕುವ ಪ್ರಯತ್ನವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯೆ ಎಂ.ಎಲ್. ಅಶ್ವಿನಿ ಆರೋಪಿಸಿದರು.

ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಪಿ.ಕೆ. ಕೃಷ್ಣದಾಸ್ ಹಾಗೂ ಬಿಜೆಪಿ ರಾಜ್ಯ ಕಚೇರಿ ‘ಮಾರಾರ್ಜಿ ಭವನ’ದ ಮೇಲೆ ನಡೆದ ದಾಳಿಯನ್ನು ಖಂಡಿಸಿ ಬಿಜೆಪಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಗರದಲ್ಲಿ ಆಯೋಜಿಸಿದ್ದ ಪ್ರತಿಭಟನೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಳೆದ ಮೂರು ತಿಂಗಳಲ್ಲಿ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರ ಆಡಳಿತ ವೈಫಲ್ಯವನ್ನು ಕೇರಳದ ಜನತೆ ಗುರುತಿಸಿದ್ದಾರೆ. ಈ ವೈಫಲ್ಯವನ್ನು ಮರೆಮಾಚಲು ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ ಎದುರಿಸುತ್ತಿರುವ ಹಿನ್ನಡೆಯಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಯೂತ್ ಕಾಂಗ್ರೆಸ್ ಹೆಸರಿನಲ್ಲಿ ವ್ಯಾಪಕವಾಗಿ ಅಹಿತಕರ ಘಟನೆಗಳಿಗೆ ಪ್ರಚೋದನೆ ನೀಡಲಾಗುತ್ತಿದೆ ಎಂದು ಅವರು ಆರೋಪಿಸಿದರು.
ಅಕ್ರಮ ಹಾಗೂ ಹಿಂಸಾಚಾರವನ್ನು ತಕ್ಷಣವೇ ನಿಲ್ಲಿಸಲು ಕಾಂಗ್ರೆಸ್ ಮುಂದಾಗಬೇಕು. ಇಲ್ಲವಾದರೆ ಬಿಜೆಪಿ ವತಿಯಿಂದ ತೀವ್ರ ಪ್ರತಿರೋಧ ಎದುರಿಸಬೇಕಾಗುತ್ತದೆ ಎಂದು ಅಶ್ವಿನಿ ಎಚ್ಚರಿಕೆ ನೀಡಿದರು.

