
ಕುಂಬಳೆ : ಬಂಬ್ರಾಣ ಜಂಕ್ಷನ್ನಲ್ಲಿ ನಿಯಂತ್ರಣ ತಪ್ಪಿದ ಕಾರೊಂದು ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದರೂ, ಮೂವರು ವೈದ್ಯಕೀಯ ವಿದ್ಯಾರ್ಥಿನಿಯರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಮೆಡಿಕಲ್ ಕಾಲೇಜಿನ ಈ ವಿದ್ಯಾರ್ಥಿನಿಯರು ಕಳತ್ತೂರಿನ ಮದುವೆ ಸಮಾರಂಭ ಮುಗಿಸಿ ಮರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಬಂಬ್ರಾಣ ಜಂಕ್ಷನ್ ಬಳಿ ಕಾರು ಚಾಲಕಿಯ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದ್ದು, ಆಘಾತಕ್ಕೆ ಎಚ್ಟಿ ಲೈನ್ ಸಹಿತ ಕಂಬ ಮುರಿದು ಕಾರಿನ ಮೇಲೆಯೇ ಬಿದ್ದಿದೆ.

ಆ ಸಮಯದಲ್ಲಿ ರಸ್ತೆಯಲ್ಲಿ ಸಾರ್ವಜನಿಕ ಸಂಚಾರವಿಲ್ಲದಿದ್ದದ್ದು ದೊಡ್ಡ ಅನಾಹುತವನ್ನು ತಪ್ಪಿಸಿದೆ. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಕೆಎಸ್ಇಬಿ ಸಿಬ್ಬಂದಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ನಂತರ ವಿದ್ಯಾರ್ಥಿನಿಯರನ್ನು ಹೊರತೆಗೆಯಲಾಯಿತು. ಸಣ್ಣಪುಟ್ಟ ಗಾಯಗೊಂಡ ಅವರಿಗೆ ಕುಂಬಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.


