
ಉಪ್ಪಳ : ತಮಗೆ ಸಿಕ್ಕಿದ್ದ ಚಿನ್ನಾಭರಣವನ್ನು ಮರಳಿ ವಾರಸುದಾರರಿಗೆ ತಲುಪಿಸುವ ಮೂಲಕ ಹೊಸಂಗಡಿಯ ಬೇಕರಿ ಮಾಲಕ ಸಮೀರ್ ಹಾಗೂ ವಾಮಂಜೂರಿನ ಅಹಮ್ಮದ್ ಮೋಣು ಮಾದರಿ ಪ್ರಾಮಾಣಿಕತೆ ಮೆರೆದಿದ್ದಾರೆ.

ಹೊಸಂಗಡಿಯ ಸಮೀರ್‌ರ ಬೇಕರಿಗೆ ಬಂದಿದ್ದ ಅಹಮ್ಮದ್ ಮೋಣು ಅವರಿಗೆ ಅಲ್ಲೇ ಬಿದ್ದಿದ್ದ ಚಿನ್ನಾಭರಣದ ಪ್ಯಾಕೆಟ್ ಸಿಕ್ಕಿತ್ತು. ಅದನ್ನು ತಕ್ಷಣವೇ ಅವರು ಸಮೀರ್‌ಗೆ ನೀಡಿದ್ದು, ಇಬ್ಬರೂ ಸೇರಿ ಮಂಜೇಶ್ವರ ಪೊಲೀಸ್ ಠಾಣೆಗೆ ಒಪ್ಪಿಸಿದ್ದರು.

ಪೊಲೀಸರ ತನಿಖೆಯಿಂದ ಆ ಚಿನ್ನ ಉಪ್ಪಳದ ಫೌಸಿಯಾ ಎಂಬವರಿಗೆ ಸೇರಿದ್ದು ಎಂದು ತಿಳಿದುಬಂತು.
ಅದರಂತೆ ಠಾಣೆಯಲ್ಲಿ ಎಸ್‌ಐಗಳಾದ ಜಿ.ಇ.ಒ. ಸದಾನಂದನ್ ಹಾಗೂ ಗಿರೀಶ್ ಬಾಬು ಸಮ್ಮುಖದಲ್ಲಿ ಅಹಮ್ಮದ್ ಮೋಣು ಅವರ ಕೈಯಿಂದಲೇ ಚಿನ್ನವನ್ನು ಫೌಸಿಯಾರಿಗೆ ಹಸ್ತಾಂತರಿಸಲಾಯಿತು.

ಇಬ್ಬರ ಈ ಪ್ರಾಮಾಣಿಕ ಕಾರ್ಯವನ್ನು ಪೊಲೀಸರು ಹಾಗೂ ವಾರಸುದಾರರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

