ಕಾಸರಗೋಡು: ವಿದೇಶಿ ಗುಲಾಮಗಿರಿಯಿಂದ ದೇಶವನ್ನು ಸ್ವತಂತ್ರಗೊಳಿಸಿದ ತ್ಯಾಗಮಯಿ ಕಾಂಗ್ರೆಸ್ ನಾಯಕರು ಕಂಡ ಶಾಂತ ಸುಂದರ ಭಾರತದ ಕನಸನ್ನು ಭಗ್ನಗೊಳಿಸಿದ ಮತೀಯ ಶಕ್ತಿಗಳ ವಿರುದ್ಧ ನೈಜ ದೇಶಪ್ರೇಮಿಗಳಾದ ಕಾಂಗ್ರೆಸಿಗರು ಸಂಧಿಯಿಲ್ಲದ ಹೋರಾಟ ನಡೆಸುವ ಮೂಲಕ ದೇಶದಲ್ಲಿ ಶಾಂತಿ ಮತ್ತು ನೆಮ್ಮದಿ ನೆಲೆಗೊಳಿಸಲು ಶ್ರಮಿಸಬೇಕಿದೆ. ಇದರ ಜೊತೆಗೆ ಮಾದಕ ದ್ರವ್ಯ ಮುಂತಾದ ಸಾಮಾಜಿಕ ಪಿಡುಗುಗಳ ವಿರುದ್ಧವೂ ಹೋರಾಟ ಚಾಲ್ತಿಯಲ್ಲಿಡಬೇಕು ಎಂದು ಕರ್ನಾಟಕದ ಮಾಜಿ ಸಚಿವರು, ಕೆಪಿಸಿಸಿ ಉಪಾಧ್ಯಕ್ಷರಾದ ಶ್ರೀ ಬಿ.ರಮಾನಾಥ ರೈಯವರು ಕರೆ ನೀಡಿದ್ದಾರೆ.
ಅವರು ಮಂಗಲ್ಪಾಡಿ ಮಂಡಲ ಕಾಂಗ್ರೆಸ್ ಸಮಿತಿಯ ಆಶ್ರಯದಲ್ಲಿ ಬಂದ್ಯೋಡ್ ಶ್ರೀ ಬರ್ನಾರ್ಡ್ ಡಿ’ಅಲ್ಮೇಡಾರ ನಿವಾಸದಲ್ಲಿ ನಡೆದ ಮಹಾ ಕುಟುಂಬ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶ್ರೀ ಬಾಬು ಬಂದ್ಯೋಡು ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನೇತಾರರಾದ ಶ್ರೀ ಸೋಮಶೇಖರ ಶೇಣಿ, ಮುಹಮ್ಮದ್ ಡಿಎಂಕೆ, ಲಕ್ಷ್ಮಣ ಪ್ರಭು, ಮುಹಮ್ಮದ್ ಸೀಗಂಡಡಿ, ತಾಹಿರಾ ಮಣಿಮುಂಡ, ಅಶ್ರಫ್ ಮುಟ್ಟಂ, ಬರ್ನಾರ್ಡ್ ಡಿ’ಅಲ್ಮೇಡಾ, ಯೂಸುಫ್ ಮಾಸ್ಟರ್, ಮೊಯಿನ್ ಪೂನಾ, ಶಿಹಾಬ್ ಎಂಕೆ ಮುಂತಾದವರು ಉಪಸ್ಥತರಿದ್ದರು. ಶ್ರೀ ಫಾರೂಕ್ ಶಿರಿಯ ಸ್ವಾಗತಿಸಿ, ಹುಸೈನ್ ಕುಬಣೂರ್ ವಂದಿಸಿದರು.