ಮಂಜೇಶ್ವರ: ಬೀದಿ ನಾಯಿಗಳ ದಾಳಿಯಿಂದ ಹೈರಾಣಾಗಿರುವ ಮಂಜೇಶ್ವರದ ಜನತೆ ಗುರುವಾರ ಗ್ರಾಮ ಪಂಚಾಯತ್ ಕಚೇರಿಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಧರಣಿ ನಡೆಸುವ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಮಕ್ಕಳಿಂದ ಹಿಡಿದು ಹಿರಿಯರ ತನಕ ಎಲ್ಲರಿಗೂ ಆತಂಕ ಮೂಡಿಸಿರುವ ಈ ಸಮಸ್ಯೆಯ ಬಗ್ಗೆ ವರ್ಷಗಳ ಹಿಂದೆಯಿಂದಲೇ ಹಲವಾರು ಬಾರಿ ದೂರು ನೀಡಿದರೂ ಕೂಡ ಕ್ರಮ ಕೈಗೊಳ್ಳದೆ ಇದ್ದ ಪಂಚಾಯತ್ ಅಧಿಕಾರಿಗಳ ನಿರ್ಲಕ್ಷ್ಯತೆಯ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
ಬೆಳಿಗ್ಗೆ ಮಂಜೇಶ್ವರ ರಿಜಿಸ್ಟ್ರಾರ್ ಕಚೇರಿ ಪರಿಸರದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ, ‘ಬೀದಿ ನಾಯಿಗಳಿಗೆ ಕಡಿವಾಣ ಹಾಕಿ’, ‘ಸಾಮಾನ್ಯ ಜನರ ಜೀವ ಭದ್ರತೆ ಕಾಯ್ದುಕೊಳ್ಳಿ’ ಎಂಬ ಘೋಷಣೆಗಳೊಂದಿಗೆ ಕಚೇರಿ ಕಡೆಗೆ ಸಾಗಿತು. ನಂತರ ಗ್ರಾಮ ಪಂಚಾಯತ್ ಕಚೇರಿ ಎದುರು ಸಮಾವೇಶಗೊಂಡ ಪ್ರತಿಭಟನಾಕಾರರು ಧರಣಿ ನಡೆಸಿದರು.
,”ಪ್ರತಿ ರಾತ್ರಿ ಬೀದಿ ನಾಯಿಗಳ ಗುಂಪುಗಳು ಮಕ್ಕಳಿಗೆ, ಪಾದಚಾರಿಗಳಿಗೆ, ಸೈಕಲ್, ಬೈಕ್ ಓಡಿಸುವವರಿಗೆ ತೀವ್ರ ಅಡಚಣೆ ಉಂಟು ಮಾಡುತ್ತಿವೆ. ಕೆಲವು ಬಾರಿ ಗಂಭೀರ ಗಾಯಗಳಿಗೂ ಕಾರಣವಾಗಿವೆ. ಇದನ್ನು ಪಂಚಾಯತ್ ಗಮನಕ್ಕೆ ತಂದಿದ್ದರೂ ಕ್ರಮವಿಲ್ಲ” ಎಂದು ಪ್ರತಿಭಟನಾ ನಿರತರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಜೊತೆಯಾಗಿ ಪಂಚಾಯತ್ ಅಧಿಕಾರಸ್ಥರು ಹಲವಾರು ಬಾರಿ ಆಶ್ವಾಸನೆ ನೀಡಿದ್ದಾರೆ. ಆದರೆ ಅದು ಕೇವಲ ಮಾತುಗಳಿಗೆ ಮಾತ್ರ ಸೀಮಿತವಾಗಿದೆ. ಈ ಬಾರಿ ಸಮಸ್ಯೆಗೆ ತಕ್ಷಣ ಪರಿಹಾರ ಕೊಡದಿದ್ದರೆ ಗ್ರಾಮಸ್ಥರು ಮುಂದಿನ ದಿನಗಳಲ್ಲಿ ಉಗ್ರ ಹೋರಾಟಕ್ಕೆ ಮುಂದಾಗಲಿದ್ದಾರೆ” ಎಂದು ಅವರು ಎಚ್ಚರಿಕೆ ನೀಡಿದರು.
ಅಬ್ದುಲ್ ರಹ್ಮಾನ್ ಹಾಜಿ, ಪ್ರಶಾಂತ್ ಕನಿಲ, ಕರುಣಾಕರ ಶೆಟ್ಟಿ, ಹನೀಫ್, ಜಬ್ಬಾರ್, ಬಾಸಿತ್, ಮುಬಾರಕ್, ಮೂಸ ರಫೀಕ್ ಮೊದಲಾದವರು ನೇತೃತ್ವ ನೀಡಿದರು.ಗ್ರಾಮಸ್ಥರು ತಾತ್ಕಾಲಿಕವಾಗಿ ಧರಣಿ ಮುಗಿಸಿ ಹಿಂತಿರುಗಿದರೂ ಕೂಡ, ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವವರೆಗೆ ಅವರು ಹೋರಾಟ ಮುಂದುವರೆಸಲು ಸಿದ್ಧರಾಗಿದ್ದಾರೆ ಎಂಬ ಸಂದೇಶವನ್ನು ಸ್ಪಷ್ಟವಾಗಿ ನೀಡಿದ್ದಾರೆ