ಮಂಜೇಶ್ವರ: ಜಿಲ್ಲೆಯಲ್ಲಿ ಡಿ.11ರಂದು ನಡೆಯಲಿರುವ ಸ್ಥಳೀಯಾಡಳಿತ ಚುನಾವಣೆಗೆ ಸಿದ್ದತೆ ಪೂರ್ಣಗೊಂಡಿದೆ ಎಂದು ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಕೆ. ಇನ್ಸಾಶೇಖರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸ್ಥಳೀಯಾಡಳಿತ ಸಂಸ್ಥೆ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇಂದು ಮಂಗಳವಾರ ಸಂಜೆ ತೆರೆಬೀಳಲಿದೆ. ಮಂಗಳವಾರದಂದು ಬೆಳಗ್ಗಿನಿಂದ ಎಲ್ಲೆಡೆ ಅಬ್ಬರದ ಪ್ರಚಾರ ಕಂಡು ಬಂತು. ಎಲ್ಲೆಡೆ ವಾಹನಗಳಲ್ಲಿ ಧ್ವನಿ ವರ್ಧಕಗಳನ್ನು ಕಟ್ಟಿ ಸುಮಧುರ ಹಾಡಿನೊಂದಿಗೆ ಅಭ್ಯರ್ಥಿಗಳ ಪರ ಪ್ರಚಾರ ಕಂಡು ಬಂತು.
ಜಿಲ್ಲಾ ಪಂಚಾಯತ್ನ 18 ಡಿವಿಜನ್, 38 ಗ್ರಾಮ ಪಂಚಾಯತ್, ಮೂರು ನಗರಸಭೆ ಹಾಗೂ ಆರು ಬ್ಲಾಕ್ ಪಂಚಾಯತ್ಗಳಿಗೆ ಡಿ.11ರಂದು ಮತದಾನ ನಡೆಯಲಿದೆ.
ಡಿ.11ರಂದು ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದೆ. ಸಂಜೆ 6 ಗಂಟೆ ತನಕ ಸರದಿ ಸಾಲಿನಲ್ಲಿರುವವರಿಗೆ ಆವಧಿ ಮೀರಿದರೂ ಮತದಾನ ಮಾಡಲು ಅವಕಾಶ ನೀಡಲಾಗುವುದು. ಸರತಿಯಲ್ಲಿರುವವರಿಗೆ ಟೋಕನ್ ನೀಡಲಾಗುವುದು. ಕೆಲ ಮತಗಟ್ಟೆಗಳಲ್ಲಿ ಮತದಾರರ ಸಂಖ್ಯೆ ಹೆಚ್ಚಿರುವ ಕಾರಣ ಮತದಾನ ವಿಳಂಬವಾಗುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಚುನಾವಣಾ ಕರ್ತವ್ಯಕ್ಕೆ 6,584 ಸಿಬ್ಬಂದಿಯನ್ನು ನೇಮಿಸಲಾಗಿದೆ. 179 ಮತಗಟ್ಟೆಗಳಲ್ಲಿ ಮಹಿಳಾ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. 119 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.
ಶಾಂತಿಯುತ ಹಾಗೂ ಸುಗಮ ಮತದಾನಕ್ಕೆ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಮತದಾನಕ್ಕಿರುವ ಸಾಮಾಗ್ರಿಗಳನ್ನು ವಿತರಿಸಲು ಹಾಗೂ ಮತ ಎಣಿಕೆಗೆ 9 ಕೇಂದ್ರಗಳನ್ನು ಸಜ್ಜುಗೊಳಿಸಲಾಗಿದೆ. ಜಿಲ್ಲೆಯಲ್ಲಿ 436 ಸೂಕ್ಷ್ಮ ಹಾಗೂ 97 ಅತೀ ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ವಿಜಯ್ ಭರತ್ ರೆಡ್ಡಿ ಹೇಳಿದರು.