ವರ್ಕಾಡಿ: ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರ (ರಿ.), ಸುಂಕದಕಟ್ಟೆ, ವರ್ಕಾಡಿ ವತಿಯಿಂದ ಆಯೋಜಿಸಲಾಗಿದ್ದ 44ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಅಂಗವಾಗಿ ಗಣಪತಿ ಮೂರ್ತಿಯ ಜಲಸ್ತಂಭನ ಶೋಭಾಯಾತ್ರೆ ಭಕ್ತಿಭಾವ ಹಾಗೂ ಸಂಭ್ರಮದಿಂದ ನಡೆಯಿತು.


ಮೂರು ದಿನಗಳ ಕಾಲ ನಡೆದ ಗಣೇಶೋತ್ಸವದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಸೆಪ್ಟೆಂಬರ್ 14ರಂದು ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಗಣೇಶೋತ್ಸವಕ್ಕೆ ಚಾಲನೆ ನೀಡಲಾಗಿದ್ದು, ವಿಶೇಷ ಪೂಜೆ, ಭಜನೆ, ಅನ್ನಸಂತರ್ಪಣೆ ಸೇರಿದಂತೆ ಹಲವು ಕಾರ್ಯಕ್ರಮಗಳು ನೆರವೇರಿದವು.


ಸ್ತಬ್ಧಚಿತ್ರ, ಹುಲಿವೇಷ ಕುಣಿತ ಹಾಗೂ ಕುಣಿತ ಭಜನೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಉತ್ಸವಕ್ಕೆ ವಿಶೇಷ ಮೆರುಗು ನೀಡಿದವು.

ಗಣೇಶೋತ್ಸವದ ಸಮಾರೋಪದ ಅಂಗವಾಗಿ ಗಣಪತಿ ಮೂರ್ತಿಯ ಜಲಸ್ಥಂಭನ ಶೋಭಾಯಾತ್ರೆಯನ್ನು ಆಯೋಜಿಸಲಾಯಿತು. ಶೋಭಾಯಾತ್ರೆಯಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು, ಭಜನೆ ಹಾಗೂ ವಾದ್ಯಘೋಷಗಳೊಂದಿಗೆ ಗಣಪತಿ ಮೂರ್ತಿಯನ್ನು ಭಕ್ತಿಪೂರ್ವಕವಾಗಿ ಕೊಂಡೊಯ್ದರು.

ಶೋಭಾಯಾತ್ರೆಯು ಸಾಗಿದ ಮಾರ್ಗದುದ್ದಕ್ಕೂ ಭಕ್ತರು ಗಣಪತಿಗೆ ಪೂಜೆ ಸಲ್ಲಿಸಿ, ಜಯಘೋಷಗಳನ್ನು ಮೊಳಗಿಸಿದರು. ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಶೋಭಾಯಾತ್ರೆ ಸಂಭ್ರಮದಿಂದ ಸಾಗಿತು.

ಬಳಿಕ ನಿಗದಿತ ಸ್ಥಳದಲ್ಲಿ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಕೋಳ್ಯೂರಿನ ಶ್ರೀ ಶಂಕರನಾರಾಯಣ ದೇವರ ಪುಣ್ಯಕೆರೆಯಲ್ಲಿ ವಿಘ್ನೇಶ್ವರನ ವಿಗ್ರಹ ಸಮರ್ಪಣೆಯನ್ನು ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ನೆರವೇರಿಸಲಾಯಿತು.ಇದರೊಂದಿಗೆ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರ (ರಿ.), ಸುಂಕದಕಟ್ಟೆ, ವರ್ಕಾಡಿ ವತಿಯಿಂದ ಆಯೋಜಿಸಲಾಗಿದ್ದ 44ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವಕ್ಕೆ ಭಕ್ತಿಪೂರ್ವಕ ಸಮಾರೋಪ ನೆರವೇರಿತು.

