ಮಂಜೇಶ್ವರ: ಕಾಸರಗೋಡು ಜಿಲ್ಲೆಯ ಮಂಜೇಶ್ವರ ಹಾಗೂ ಕಾಸರಗೋಡು ಬಿ ಆರ್. ಸಿ ಗೆ ಬ್ಲಾಕ್ ಕೋ – ಆರ್ಡಿನೇಟರ್ ಆಗಿ ಮಲಯಾಳಿಗಳನ್ನು ನೇಮಿಸಿರುವುದಕ್ಕೆ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ ಮಂಜೇಶ್ವರ ಉಪಜಿಲ್ಲಾ ಸಮಿತಿ ಖಂಡಿಸಿದೆ.

ಕನ್ನಡ ಭಾಷಾ ಅಲ್ಪ ಸಂಖ್ಯಾತ ಪ್ರದೇಶಗಳ ಬಿ ಆರ್ ಸಿ ಹಾಗೂ ಇತರ ಪ್ರಮುಖ ಶೈಕ್ಷಣಿಕ ಹುದ್ದೆಗಳಿಗೆ ಕನ್ನಡ ತಿಳಿದಿರುವ ಅರ್ಹ ಅಧಿಕಾರಿಗಳು ಮತ್ತು ಶಿಕ್ಷಕರನ್ನು ನೇಮಕ ಮಾಡುವ ಬಗ್ಗೆ ಸ್ಪಷ್ಟ ಆದೇಶವಿದ್ದರೂ ಇಲಾಖೆ ಇದನ್ನು ಮರೆಮಾಚುತ್ತಿದೆ.

ಕನ್ನಡದ ಅರ್ಹ ಅಭ್ಯರ್ಥಿಗಳ ಅರ್ಜಿಗಳನ್ನು ಪರಿಗಣಿಸದೆ ಕನ್ನಡ ಭಾಷೆ ತಿಳಿಯದವರನ್ನು ನೇಮಕ ಮಾಡಿರುವುದು ಕನ್ನಡಿಗರಿಗೆ ಮಾಡಿದ ಅನ್ಯಾಯವಾಗಿದೆ. ಇದನ್ನು ಕೂಡಲೇ ಸರಿಪಡಿಸಿ ಕನ್ನಡದ ಅರ್ಹ ಅಭ್ಯರ್ಥಿಗಳಿಗೆ ಅವಕಾಶ ನೀಡದಿದ್ದಲ್ಲಿ ಕಾನೂನಾತ್ಮಕ ಹೋರಾಟದ ಜತೆ ಉಗ್ರ ಪ್ರತಿಭಟನೆಯನ್ನು ಕೈಗೊಳ್ಳಬೇಕಾದಿತು ಎಂದು ಸಂಘಟನೆ ತಿಳಿಸಿದೆ.

