
ಮಂಜೇಶ್ವರ: ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಬಡಾಜೆ ಚೌಕಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇತ್ತೀಚೆಗೆ ಕಳ್ಳರ ಹಾವಳಿ ಮಿತಿಮೀರಿದ್ದು, ಸ್ಥಳೀಯ ನಿವಾಸಿಗಳು ತೀವ್ರ ಭೀತಿಯಲ್ಲಿ ದಿನ ದೂಡುವಂತಾಗಿದೆ.ಕಳ್ಳರ ಉಪಟಳದಿಂದಾಗಿ ಸಾರ್ವಜನಿಕರು ರಾತ್ರಿ ವೇಳೆ ಹಾಗೂ ಮನೆಯಿಂದ ಹೊರಗೆ ತೆರಳಲು ಭಯಪಡುವಂತಹ ಆತಂಕಕಾರಿ ವಾತಾವರಣ ನಿರ್ಮಾಣವಾಗಿದೆ.

ಬಡಾಜೆ ಚೌಕಿ ನಿವಾಸಿ, ಪ್ರಸ್ತುತ ಗಲ್ಫ್ ಉದ್ಯೋಗಿಯಾಗಿರುವ ಅಬೂಬಕ್ಕರ್ ಸಿದ್ದೀಖ್ ಎಂಬವರ ನಿರ್ಮಾಣ ಹಂತದಲ್ಲಿರುವ ಮನೆಯನ್ನು ಗುರಿಯಾಗಿಸಿಕೊಂಡ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಮನೆಗೆ ವಿದ್ಯುತೀಕರಣ- ವೈರಿಂಗ್ ಮಾಡಲು ಅಳವಡಿಸಲಾಗಿದ್ದ ಬೆಲೆಬಾಳುವ ವಿದ್ಯುತ್ ಕೇಬಲ್‌ಗಳನ್ನು ಕಳವು ಮಾಡಲಾಗಿದೆ.
ವೈರಿಂಗ್ ಕಾಮಗಾರಿಯನ್ನು ಪೂರ್ಣಗೊಳಿಸಲು ಕೆಲಸಗಾರರು ಮನೆಗೆ ಆಗಮಿಸಿದಾಗ ಕಳವು ನಡೆದಿರುವ ವಿಚಾರ ಬೆಳಕಿಗೆ ಬಂದಿದೆ.
ಸುಸಜ್ಜಿತವಾಗಿ ಅಳವಡಿಸಲಾಗಿದ್ದ ಕೇಬಲ್‌ಗಳನ್ನು ಕಿತ್ತುಕೊಂಡು ಹೋಗಿರುವುದು ಕಂಡುಬಂದಿದೆ.

ಕೇವಲ ವಿದ್ಯುತ್ ಕೇಬಲ್ ಮಾತ್ರವಲ್ಲದೆ, ಅದೇ ಕಾಮಗಾರಿ ನಡೆಯುತ್ತಿರುವ ನೂತನ ಮನೆಯಲ್ಲಿದ್ದ ಹಾಗೂ ಪಕ್ಕದ ಸಮೀಪದ ಮನೆಯಲ್ಲಿ ಕಾಯ್ದಿರಿಸಲಾಗಿದ್ದ ಬೆಲೆಬಾಳುವ ಗ್ರಾನೈಟ್ ಮೋಟಾರ್‌ಗಳನ್ನು ಸಹ ಕಳ್ಳರು ಕದ್ದೊಯ್ದಿದ್ದಾರೆ.
ನಿರ್ಜನ ಪ್ರದೇಶ ಹಾಗೂ ನಿರ್ಮಾಣ ಹಂತದ ಮನೆಗಳನ್ನೇ ಟಾರ್ಗೆಟ್ ಮಾಡಿ ಈ ಕೃತ್ಯ ಎಸಗಲಾಗಿದೆ.

ಘಟನೆಯಿಂದ ಆಘಾತಕ್ಕೊಳಗಾದ ಮನೆ ಮಾಲಕರ ಸಂಬಂಧಿಕ ಅಬ್ದುಲ್ ಹಮೀದ್ ಮಂಜೇಶ್ವರ ಪೊಲೀಸ್ ಠಾಣೆಗೆ ತೆರಳಿ ಅಧಿಕೃತ ದೂರು ದಾಖಲಿಸಿದ್ದಾರೆ.ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರದೇಶದಲ್ಲಿ ಸರಣಿ ಕಳವು ಪ್ರಕರಣಗಳು ಹೆಚ್ಚಾಗುತ್ತಿದ್ದರೂ ಸೂಕ್ತ ಭದ್ರತೆ ಇಲ್ಲದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಕಳ್ಳರನ್ನು ಬಂಧಿಸಬೇಕು ಹಾಗೂ ಬಡಾಜೆ ಚೌಕಿ ಸುತ್ತಮುತ್ತ ರಾತ್ರಿ ವೇಳೆಯ ಪೊಲೀಸ್ ಗಸ್ತು ಪಡೆಯನ್ನು ಹೆಚ್ಚಿಸಬೇಕು ಎಂದು ಸಾರ್ವಜನಿಕರು ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.

