ಹೊಸಂಗಡಿ ರೈಲ್ವೆ ಗೇಟ್ ಟ್ರಾಫಿಕ್ ಜಾಂ: ಕಾಯುವುದೇ ವಾಹನ ಸವಾರರ ನಿತ್ಯ ಭವಿಷ್ಯ

​ ಮಂಜೇಶ್ವರ: ಮಂಜೇಶ್ವರ ತಾಲೂಕಿನ ಪ್ರಮುಖ ವಾಣಿಜ್ಯ ಮತ್ತು ಜನನಿಬಿಡ ಕೇಂದ್ರವಾದ ಹೊಸಂಗಡಿ ಪೇಟೆಯಲ್ಲಿ ಸಂಚಾರ ದಟ್ಟಣೆ ಮಿತಿಮೀರಿದ್ದು, ರೈಲ್ವೆ ಗೇಟ್‌ನ ಕಿರಿಕಿರಿ ಸಾರ್ವಜನಿಕರನ್ನು ಹೈರಾಣಾಗಿಸಿದೆ.

ನಿತ್ಯ ಸಾವಿರಾರು ಜನರು ಹಾಗೂ ವಾಹನಗಳು ಸಂಚರಿಸುವ ಈ ರಸ್ತೆಯಲ್ಲಿ ರೈಲ್ವೆ ಗೇಟ್ ಬೀಳುವುದು ವಾಹನ ಸವಾರರ ಪಾಲಿಗೆ ದೊಡ್ಡ ಶಿಕ್ಷೆಯಾಗಿ ಪರಿಣಮಿಸಿದೆ.
​
​ಹೊಸಂಗಡಿಯಿಂದ ಬಂಗ್ರ ಮಂಜೇಶ್ವರ, ಪೊಲೀಸ್ ಸ್ಟೇಷನ್, ಸಬ್ ರಿಜಿಸ್ಟ್ರಾರ್ ಕಚೇರಿ, ಅನಂತೇಶ್ವರ ದೇವಸ್ಥಾನ, ಜೈನ ಬಸದಿ ಹಾಗೂ ಮಂಗಳೂರು-ಕಾಸರಗೋಡು ಕಡೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದೆ. ಆದರೆ ಪ್ರತಿದಿನ ರೈಲ್ವೆ ಗೇಟ್ ಮುಚ್ಚಿದಾಗ 10 ರಿಂದ 15 ನಿಮಿಷಗಳ ಕಾಲ ನೂರಾರು ವಾಹನಗಳು ಸಾಲಾಗಿ ನಿಲ್ಲಬೇಕಾದ ಪರಿಸ್ಥಿತಿ ಇದೆ.

ತುರ್ತು ಪರಿಸ್ಥಿತಿಯಲ್ಲಿ ರೋಗಿಗಳನ್ನು ಕರೆದೊಯ್ಯುವ ಆಂಬುಲೆನ್ಸ್‌ಗಳು ಸಹ ಈ ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಳ್ಳುತ್ತಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

​ಕಳೆದ ಕೆಲವು ದಶಕಗಳಿಂದ ಹೊಸಂಗಡಿ ಹಾಗೂ ಉದ್ಯಾವರದಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಿಸಬೇಕೆಂಬ ಸಾರ್ವಜನಿಕರ ಕೂಗು ಕೇಳಿಸುತ್ತಲೇ ಇದೆ. ಉದ್ಯಾವರ ರೈಲ್ವೆ ಸೇತುವೆ ನಿರ್ಮಾಣಕ್ಕೆ 40.64 ಕೋಟಿ ರೂಪಾಯಿ ವೆಚ್ಚದ ಯೋಜನೆಗೆ ಕೇರಳ ಸರ್ಕಾರ ಮತ್ತು ರೈಲ್ವೆ ಇಲಾಖೆಯಿಂದ ಅನುಮೋದನೆ ಸಿಕ್ಕಿ, ತಾಂತ್ರಿಕ ನಕ್ಷೆಯೂ ಸಿದ್ಧವಾಗಿದೆ. ಆದರೆ, ಸ್ಥಳೀಯ ಜನಪ್ರತಿನಿಧಿಗಳ ನಿರ್ಲಕ್ಷ್ಯ ಹಾಗೂ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಉಂಟಾಗಿರುವ ಅನಗತ್ಯ ವಿಳಂಬದಿಂದಾಗಿ ಕಾಮಗಾರಿ ಇನ್ನೂ ಕಾಗದದಲ್ಲೇ ಉಳಿದಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

​ಒಂದೆಡೆ ರೈಲ್ವೆ ಗೇಟ್ ಸಮಸ್ಯೆ ಇದ್ದರೆ, ಇನ್ನೊಂದೆಡೆ ಮಂಗಳೂರಿಗೆ ತೆರಳುವ ಪ್ರಯಾಣಿಕರಿಗೆ ಹೊಸಂಗಡಿಯಲ್ಲಿ ಸೂಕ್ತ ಬಸ್ ನಿಲ್ದಾಣವೇ ಇಲ್ಲ. ಪ್ರಯಾಣಿಕರು ಕುಳಿತುಕೊಳ್ಳಲು ಸರಿಯಾದ ತಂಗುದಾನವಿಲ್ಲದೆ, ಕಬ್ಬಿನ ಹಾಲಿನ ಅಂಗಡಿಗಳ ಬದಿಯಲ್ಲಿ ಅಥವಾ ಖಾಲಿ ಜಾಗದಲ್ಲಿ ಬಿಸಿಲು-ಮಳೆಗೆ ಒಡ್ಡಿ ನಿಲ್ಲಬೇಕಾಗಿದೆ.

​ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ತಕ್ಷಣವೇ ಎಚ್ಚೆತ್ತುಕೊಂಡು ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ ರೈಲ್ವೆ ಮೇಲ್ಸೇತುವೆ ಹಾಗೂ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಿಸಬೇಕು ಎಂದು ಮಂಜೇಶ್ವರ ಗ್ರಾಹಕ ವೇದಿಕೆ ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!