ಸಪ್ತ ಭಾಷಾ ಸೌಹಾರ್ದತೆಯ ‘ಕೇರಳೋತ್ಸವಂ- 2026’ಕ್ಕೆ ಅದ್ಧೂರಿ ಚಾಲನೆ

​ಮಂಜೇಶ್ವರ: ಸಪ್ತ ಭಾಷೆಗಳ ಸೌಹಾರ್ದ ನಾಡು ಹಾಗೂ ಸಾಂಸ್ಕೃತಿಕ ವೈವಿಧ್ಯತೆಯ ಸಂಗಮವಾದ ಮಂಜೇಶ್ವರದಲ್ಲಿ, ಮಂಜೇಶ್ವರ ಗ್ರಾಮ ಪಂಚಾಯತ್ ಹಾಗೂ ಕೇರಳ ರಾಜ್ಯ ಯೂತ್ ವೆಲ್ಫೇರ್ ಬೋರ್ಡ್ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿರುವ ‘ಕೇರಳೋತ್ಸವಂ- 26 ಕಾರ್ಯಕ್ರಮಕ್ಕೆ ಮಂಜೇಶ್ವರದ ಎಸ್.ಎ.ಟಿ. ಶಾಲಾ ಸಭಾಂಗಣದಲ್ಲಿ ಅತ್ಯಂತ ಸಂಭ್ರಮದಿಂದ ಚಾಲನೆ ದೊರಕಿತು.


​ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ಬಶೀರ್ ಕನಿಲ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷರಾದ ಯು.ಕೆ. ಸೈಫುಲ್ಲಾ ತಂಘಲ್ ಅವರು ದೀಪ ಬೆಳಗಿಸಿ ಅಧಿಕೃತವಾಗಿ ಉದ್ಘಾಟಿಸಿ ಚಾಲನೆ ನೀಡಿದರು.

​ ಮಂಜೇಶ್ವರ ಗ್ರಾಮ ಪಂಚಾಯತ್ ಐ.ಸಿ.ಎಸ್.ಐ. ಕಾರ್ಯದರ್ಶಿ ಶ್ರೀ ಸುಕೇಶ್ ಕೆ. ಅವರು ಸ್ವಾಗತ ಕೋರಿ, ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲಾ ಗಣ್ಯರನ್ನು ಹಾಗೂ ಸಾರ್ವಜನಿಕರನ್ನು ಬರಮಾಡಿಕೊಂಡರು.

ಸಮಾರಂಭದಲ್ಲಿ ಮಂಜೇಶ್ವರ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಫಾತಿಮಾತ್ ಝಹುರಾ ಹಾಗೂ ಜಿಲ್ಲಾ ಪಂ. ಸದಸ್ಯೆ ಇರ್ಫಾನ ಇಕ್ಬಾಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.

​ ಕಾರ್ಯಕ್ರಮದಲ್ಲಿ ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರಾದ ಶ್ರೀಮತಿ ಫರ್ಹಾನಾ ಅಬ್ದುಲ್ ರಹಿಮಾನ್, ಶ್ರೀ ಅಬ್ದುಲ್ ರಹಿಮಾನ್ ಕೆ.ಎಂ.ಕೆ., ಶ್ರೀಮತಿ ರುಬೀನ ಬಾನು ಹಾಗೂ ಪಂಚಾಯತ್ ಸದಸ್ಯರಾದ ಇಲ್ಯಾಸ್ ತೂಮಿನಾಡು, ಮುಕ್ತಾರ್, ನಾಗೇಶ್ ಎಂ. ಸೇರಿದಂತೆ ಗ್ರಾಮ ಪಂಚಾಯತ್ ಸದಸ್ಯರು ಮತ್ತು ವಿವಿಧ ಸಮಿತಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

​ಸಪ್ತ ಭಾಷಾ ಭೂಮಿಯ ಸೊಬಗನ್ನು ಬಿಂಬಿಸುವ ಈ ಸಾಂಸ್ಕೃತಿಕ ಹಬ್ಬದಲ್ಲಿ ಭಾಗವಹಿಸಲು ನಲವತ್ತಕ್ಕೂ ಹೆಚ್ಚು ಗಣ್ಯರು ಹಾಗೂ ಪಂಚಾಯತ್ ಪ್ರತಿನಿಧಿಗಳ ದಂಡೇ ಹರಿದುಬಂದಿದ್ದು, ಸ್ಥಳೀಯ ಕಲಾಪ್ರೇಮಿಗಳು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುತ್ತಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!