ಲಖನೌ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮಥುರಾದ ಶ್ರೀಕೃಷ್ಣ ಜನ್ಮಭೂಮಿ ಮಂದಿರ ನಿರ್ಮಾಣದ ವಿಚಾರವನ್ನು ಚುನಾವಣಾ ಪ್ರಚಾರದ ಪ್ರಮುಖ ಅಸ್ತ್ರವನ್ನಾಗಿ ಬಳಸಲು ಬಿಜೆಪಿ ಸಿದ್ಧತೆ ನಡೆಸಿದೆ. ಮಥುರಾದಲ್ಲಿ ಕೃಷ್ಣ ಮಂದಿರ ನಿರ್ಮಿಸುವುದಾಗಿ ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ನೀಡಿರುವ ಹೇಳಿಕೆ ಇದೀಗ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಮಥುರಾದಲ್ಲಿ ನಡೆದ ಬಿಜೆಪಿಯ ಎರಡು ದಿನಗಳ ಚಿಂತನ ಶಿಬಿರದ ಸಂದರ್ಭದಲ್ಲಿ ಮೌರ್ಯ ಈ ಹೇಳಿಕೆ ನೀಡಿದ್ದಾರೆ. ನ್ಯಾಯಾಲಯದ ಪ್ರಕ್ರಿಯೆಗಳ ಮೂಲಕ ಅಥವಾ ಪರಸ್ಪರ ಮಾತುಕತೆಯ ಮೂಲಕ ಮಥುರಾದಲ್ಲಿ ಶ್ರೀಕೃಷ್ಣ ಮಂದಿರ ನಿರ್ಮಿಸಲಾಗುವುದು ಎಂಬ ಭರವಸೆಯನ್ನು ಅವರು ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ನಿಜವಾದ ಕೃಷ್ಣ ಭಕ್ತರಾಗಿದ್ದರೆ ಮಂದಿರ ನಿರ್ಮಾಣದ ವಿಚಾರದಲ್ಲಿ ಮುಂದೆ ಬರಬೇಕು ಎಂದು ಮೌರ್ಯ ಸವಾಲು ಹಾಕಿದ್ದಾರೆ. ಇದರಿಂದ ಸಮಾಜವಾದಿ ಪಕ್ಷದ ‘ಸೈಕಲ್’ ಮುಳುಗುವುದನ್ನು ತಪ್ಪಿಸಬಹುದು ಎಂದು ವ್ಯಂಗ್ಯವಾಡಿದ್ದಾರೆ.

‘ಅಯೋಧ್ಯೆಯನ್ನು ನಾವು ಈಗಾಗಲೇ ಮರಳಿ ಪಡೆದಿದ್ದೇವೆ. ಇನ್ನು ಮಥುರಾದ ಸರದಿ’ ಎಂಬ ಘೋಷಣೆಯನ್ನೂ ಅವರು ನೀಡಿದ್ದಾರೆ.ಈ ಹಿಂದೆ ಉತ್ತರ ಪ್ರದೇಶವನ್ನು ಮಾಫಿಯಾ ನಾಯಕರು ಮತ್ತು ಗೂಂಡಾಗಳು ಆಳುತ್ತಿದ್ದರು. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸುಧಾರಿಸಿದೆ ಎಂದು ಮೌರ್ಯ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.

ಮೌರ್ಯ ಅವರ ಈ ಹೇಳಿಕೆಯ ಬೆನ್ನಲ್ಲೇ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಥುರಾ ಮಂದಿರದ ವಿಚಾರ ಬಿಜೆಪಿಯ ಪ್ರಮುಖ ಚುನಾವಣಾ ಪ್ರಚಾರದ ವಿಷಯವಾಗುವ ಸಾಧ್ಯತೆ ಕುರಿತು ರಾಜಕೀಯ ವಲಯದಲ್ಲಿ ಚರ್ಚೆ ಆರಂಭವಾಗಿದೆ.

