ಸೌರವ್ ಗಂಗೂಲಿ ಜೀವನ ಬೆಳ್ಳಿತೆರೆಗೆ; ‘ದಾದಾ’ ಚಿತ್ರದ ಫಸ್ಟ್ ಲುಕ್ ರಿಲೀಸ್

ಸೌರವ್ ಗಂಗೂಲಿ (Saurav Ganguly), ಭಾರತ ಕ್ರಿಕೆಟ್​​ನ ನಂಬರ್ 1 ನಾಯಕ. ಭಾರತ ಕ್ರಿಕೆಟ್ ಚಹರೆಯನ್ನೇ ಬದಲಾಯಿಸಿದ ವ್ಯಕ್ತಿ. ಅದ್ಭುತ ಬ್ಯಾಟ್ಸ್​​ಮನ್ ಆಗಿದ್ದ ಜೊತೆಗೆ ಭಾರತ ಕ್ರಿಕೆಟ್ ತಂಡಕ್ಕೆ ‘ವಿನ್ನಿಂಗ್ ಮೈಂಡ್​​ಸೆಟ್’ ತೋರಿಸಿಕೊಟ್ಟ ನಾಯಕ. ವಿಶ್ವಕಪ್ ಗೆದ್ದಿಲ್ಲವಾದರೂ ಭಾರತ ಕ್ರಿಕೆಟ್ ಕಂಡ ಅತ್ಯುತ್ತಮ ನಾಯಕರಲ್ಲಿ ಮೊದಲಿಗರು ಎನ್ನಬಹುದು ಸೌರವ್ ಗಂಗೂಲಿ ಅವರನ್ನು. ಇದೀಗ ಭಾರತ ಕ್ರಿಕೆಟ್ ಕಂಡ ಅದ್ಭುತ ನಾಯಕನ ಜೀವನ ಕುರಿತಾದ ಕತೆ ಸಿನಿಮಾ ಆಗಿದೆ. ಮಾತ್ರವಲ್ಲದೆ ಇಂದು (ಜುಲೈ 8) ಸೌರವ್ ಗಂಗೂಲಿ ಹುಟ್ಟುಹಬ್ಬದ ಪ್ರಯುಕ್ತ ಸಿನಿಮಾದ ಬಿಡುಗಡೆ ದಿನಾಂಕವನ್ನು ಸಹ ಘೋಷಿಸಲಾಗಿದೆ.

ಸೌರವ್ ಗಂಗೂಲಿ ಅವರನ್ನು ಅವರ ಗೆಳೆಯರು, ಕ್ರಿಕೆಟ್ ಸಹವರ್ತಿಗಳು ‘ದಾದಾ’ ಎಂದು ಕರೆಯುತ್ತಿದ್ದರು. ಹಾಗಾಗಿ ಸೌರವ್ ಜೀವನ ಆಧರಿಸಿದ ಸಿನಿಮಾಕ್ಕೆ ಸಹ ಅದೇ ಹೆಸರು ಇಡಲಾಗಿದೆ. ‘ದಾದಾ – ದಿ ಸೌರವ್ ಗಂಗೂಲಿ ಸ್ಟೋರಿ’ ಸಿನಿಮಾನಲ್ಲಿ ಸೌರವ್ ಗಂಗೂಲಿ ಪಾತ್ರದಲ್ಲಿ ಬಾಲಿವುಡ್ ನಟ ರಾಜ್​​ಕುಮಾರ್ ರಾವ್ ನಟಿಸಿದ್ದಾರೆ.
ಚಿತ್ರದ ಫಸ್ಟ್-ಲುಕ್ ಪೋಸ್ಟರ್ ಇಂದು ಬಿಡುಗಡೆ ಆಗಿದ್ದು, ಚಿತ್ರವು 2027ರ ಮೇ 14ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ .

ಈಗ ಬಿಡುಗಡೆ ಆಗಿರುವ ಪೋಸ್ಟರ್‌ನಲ್ಲಿ 2002ರಲ್ಲಿ ಇಂಗ್ಲೆಂಡ್ ವಿರುದ್ಧದ ನಾಟ್‌ವೆಸ್ಟ್ ಟ್ರೋಫಿ ಗೆದ್ದ ನಂತರ ಲಾರ್ಡ್ಸ್ ಬಾಲ್ಕನಿಯಲ್ಲಿ ಗಂಗೂಲಿ ಅವರು ಶರ್ಟ್ ಬಿಚ್ಚಿ ಸಂಭ್ರಮಿಸಿದ ಆ ಸುಪ್ರಸಿದ್ಧ ಕ್ಷಣವನ್ನು ಮರುಸೃಷ್ಟಿಸಲಾಗಿದೆ. ಈ ಸಿನಿಮಾನಲ್ಲಿ ಗಂಗೂಲಿ ಅವರ ಯುವ ಕ್ರಿಕೆಟಿಗನಾಗಿದ್ದ ದಿನಗಳಿಂದ ಹಿಡಿದು ಭಾರತದ ಅತ್ಯಂತ ಪ್ರಭಾವಶಾಲಿ ನಾಯಕನಾಗಿ ಬೆಳೆದ ಪ್ರಯಾಣದ ಕತೆ ಇರಲಿದೆ. ಭಾರತ ಕ್ರಿಕೆಟ್ ಮೇಲೆ ಸೌರವ್ ಅವರ ಪ್ರಭಾವ, ತಂದ ಬದಲಾವಣೆಗಳ ಮೇಲೆ ಸಿನಿಮಾದ ಕತೆ ಕೇಂದ್ರೀಕೃತವಾಗಿರಲಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!