ಗ್ಯಾಸ್ ವಿತರಣೆಯಲ್ಲಿ ಅಕ್ರಮ ಆರೋಪ: ಡಿವೈಎಫ್‌ಐ ಆಕ್ರೋಶ

ಮಂಗಳೂರು: ಗ್ಯಾಸ್ ವಿತರಣೆಯಲ್ಲಿ ಉದ್ದೇಶಪೂರ್ವಕ ವಿಳಂಬ ಮಾಡಲಾಗುತ್ತಿದ್ದು, ಏಜನ್ಸಿಗಳು ಅಕ್ರಮ ದಂಧೆಯಲ್ಲಿ ತೊಡಗಿವೆ ಎಂದು ಆರೋಪಿಸಿ ಡಿವೈಎಫ್‌ಐ ವತಿಯಿಂದ ಮಂಗಳವಾರ ನಗರದ ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಯಿತು.

ಪ್ರತಿಭಟನೆಯಲ್ಲಿ ಮಾತನಾಡಿದ ಬಿ.ಕೆ. ಇಮ್ತಿಯಾಝ್, ಅಮೇರಿಕಾ–ಇರಾನ್ ಯುದ್ಧ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಂಡು ಗ್ಯಾಸ್ ಮಾಫಿಯಾ ಸಕ್ರಿಯವಾಗಿದ್ದು, ಇದನ್ನು ನಿಯಂತ್ರಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಗ್ಯಾಸ್ ಕೊರತೆ ಇದ್ದರೂ ಮಂಗಳೂರಿನ ಎಚ್‌ಪಿಸಿಎಲ್ ಸ್ಥಾವರಗಳಿಂದ ಪ್ರತಿದಿನ ಸುಮಾರು 300ಕ್ಕೂ ಹೆಚ್ಚು ಬುಲೆಟ್ ಟ್ಯಾಂಕರ್‌ಗಳಲ್ಲಿ ಗ್ಯಾಸ್ ಮಹಾರಾಷ್ಟ್ರಕ್ಕೆ ಸಾಗುತ್ತಿದೆ ಎಂದು ಆರೋಪಿಸಿದ ಅವರು, ಸಂಕಷ್ಟದ ಸಮಯದಲ್ಲಿ ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ಲಾಭ ಗಳಿಸುವ ಯತ್ನ ನಡೆಯುತ್ತಿದೆ ಎಂದು ದೂರಿದರು.

ಗ್ಯಾಸ್ ಏಜನ್ಸಿಗಳು ಕಾಳಬಜಾರ್ ನಡೆಸುತ್ತಿರುವುದನ್ನು ತಕ್ಷಣ ನಿಲ್ಲಿಸಬೇಕು. ಸರಿಯಾದ ವಿತರಣೆಗೆ ಕ್ರಮ ಕೈಗೊಳ್ಳದಿದ್ದರೆ ಏಜನ್ಸಿಗಳಿಗೆ ಮುತ್ತಿಗೆ ಹಾಕಿ ತೀವ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ಈ ಸಂದರ್ಭದಲ್ಲಿ ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಸೇರಿದಂತೆ ನವೀನ್ ಕೊಂಚಾಡಿ, ತಯ್ಯುಬ್ ಬೆಂಗ್ರೆ, ಜಗದೀಶ್ ಬಜಾಲ್, ಖಾಲಿದ್ ಹರೇಕಳ, ತೌಸೀಫ್ ಬೈಕಂಪಾಡಿ, ಪ್ರವೀಣ್ ಕೊಂಚಾಡಿ ಹಾಗೂ ಜನವಾದಿ ಮಹಿಳಾ ಸಂಘಟನೆಯ ಭಾರತಿ ಬೋಳಾರ, ಯೋಗೀತಾ ಸುವರ್ಣ ಮತ್ತು ಇತರರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!