ದೇರಳಕಟ್ಟೆಯಲ್ಲಿ ಎಂಸಿಸಿ ಬ್ಯಾಂಕ್ 22ನೇ ಶಾಖೆ ಉದ್ಘಾಟನೆ

ಮಂಗಳೂರು, ಜೂ. 28: ಗ್ರಾಹಕರ ಸರ್ವತೋಮುಖ ಅಭಿವೃದ್ಧಿ ಹಾಗೂ ಸಮುದಾಯದ ಪ್ರಗತಿಯೇ ಎಂಸಿಸಿ ಬ್ಯಾಂಕ್‌ನ ಮುಖ್ಯ ಧ್ಯೇಯವಾಗಿದ್ದು, ಇದೇ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಬ್ಯಾಂಕ್ ಗ್ರಾಹಕರ ವಿಶ್ವಾಸ ಗಳಿಸಿದೆ ಎಂದು ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ಹೇಳಿದರು.

ದೇರಳಕಟ್ಟೆಯ ಫಾದರ್ ಮುಲ್ಲರ್ ಕಟ್ಟಡ ಸಂಕೀರ್ಣದಲ್ಲಿ ಎಂಸಿಸಿ ಬ್ಯಾಂಕ್‌ನ 22ನೇ ಶಾಖೆ ಹಾಗೂ 16ನೇ ಎಟಿಎಂ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

114 ವರ್ಷಗಳ ಸೇವೆ ಪೂರ್ಣಗೊಳಿಸಿರುವ ಎಂಸಿಸಿ ಬ್ಯಾಂಕ್, 2025-26ನೇ ಹಣಕಾಸು ವರ್ಷದಲ್ಲಿ 22.89 ಶೇಕಡಾ ಬೆಳವಣಿಗೆಯೊಂದಿಗೆ ₹1,535 ಕೋಟಿ ವ್ಯವಹಾರದ ಮೈಲಿಗಲ್ಲು ತಲುಪಿದ್ದು, ಬ್ಯಾಂಕಿನ ನಿವ್ವಳ ಮೌಲ್ಯ ₹91.80 ಕೋಟಿಗೆ ಏರಿಕೆಯಾಗಿದೆ ಎಂದು ತಿಳಿಸಿದರು. ಎನ್‌ಆರ್‌ಐ ಗ್ರಾಹಕರ ಬೆಂಬಲ, ಸಮರ್ಥ ಆಡಳಿತ ಹಾಗೂ ಸಿಬ್ಬಂದಿಯ ಕಾರ್ಯಕ್ಷಮತೆಯೇ ಬ್ಯಾಂಕಿನ ಬೆಳವಣಿಗೆಗೆ ಕಾರಣವಾಗಿದೆ ಎಂದರು.

ಪಾನೀರ್‌ನ ಅವರ್ ಲೇಡಿ ಆಫ್ ಮರ್ಸಿ ಚರ್ಚ್ ಧರ್ಮಗುರು ಫಾ. ವಿಕ್ಟರ್ ಡಿಮೆಲ್ಲೊ ಶಾಖೆಯನ್ನು ಉದ್ಘಾಟಿಸಿ, ಎಲ್ಲ ಗ್ರಾಹಕರಿಗೂ ಸಮಾನ ಸೇವೆ ನೀಡುವ ಮೂಲಕ ಬ್ಯಾಂಕ್ ಮಾದರಿ ಸಂಸ್ಥೆಯಾಗಿ ಬೆಳೆಯಲಿ ಎಂದು ಹಾರೈಸಿದರು.

ಮುಖ್ಯ ಅತಿಥಿಯಾಗಿದ್ದ ಆರ್ಸುಲಾಯ್ಡ್ ಫ್ರಾನ್ಸಿಸ್ಕನ್ ಸಭೆಯ ಸುಪೀರಿಯರ್ ಜನರಲ್ ಸಿಸ್ಟರ್ ಮಿಲ್ಲಿ ಫೆರ್ನಾಂಡಿಸ್ ಮಾತನಾಡಿ, ಹಣಕಾಸು ಸೇವೆಯೊಂದಿಗೆ ಸಮಾಜದ ಸಮಗ್ರ ಅಭಿವೃದ್ಧಿಗೆ ಬ್ಯಾಂಕ್ ನೀಡುತ್ತಿರುವ ಕೊಡುಗೆ ಶ್ಲಾಘನೀಯ ಎಂದರು.

ಫಾದರ್ ಮುಲ್ಲರ್ ಹೋಮಿಯೋಪತಿ ಕಾಲೇಜಿನ ಆಡಳಿತಾಧಿಕಾರಿ ಫಾ. ನಿಲೇಶ್ ಕ್ರಾಸ್ತಾ, ಕೋಟೆಕಾರ್ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ದಿವ್ಯಾ ಸತೀಶ್ ಶೆಟ್ಟಿ ಹಾಗೂ ಇತರ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸಮಾಜಸೇವಕರಾದ ಫ್ರಾನ್ಸಿಸ್ ಕುಟಿನ್ಹಾ, ಆಲ್ವಿನ್ ಜೊರಾಮ್ ಡಿಸೋಜ, ಸಿ.ಎ. ಮ್ಯಾಕ್ಸಿಮ್ ಫೆರ್ನಾಂಡಿಸ್, ಉಗ್ಗಪ್ಪ ಪೂಜಾರಿ ಹಾಗೂ ಶಫಿ ಬಬ್ಬುಕಟ್ಟೆ ಅವರನ್ನು ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಿ, ವಿವಿಧ ಸಂಸ್ಥೆಗಳಿಗೆ ಬ್ಯಾಂಕ್ ವತಿಯಿಂದ ಆರ್ಥಿಕ ನೆರವು ವಿತರಿಸಲಾಯಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!