ಕಾಸರಗೋಡು : ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ದರ್ಶನ ಮುಗಿಸಿ ಕುಟುಂಬದೊಂದಿಗೆ ರೈಲಿನಲ್ಲಿ ಹಿಂದಿರುಗುತ್ತಿದ್ದ ಇಬ್ಬರು ಯುವತಿಯರಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಕಣ್ಣೂರು ಮೂಲದ ಇ. ದೀಪು (36) ಹಾಗೂ ಪ್ರಮೋದ್ (54) ಎಂಬುವವರನ್ನು ಕಾಸರಗೋಡು ರೈಲ್ವೆ ಪೊಲೀಸರು ಬಂಧಿಸಿದ್ದಾರೆ.

ರೈಲು ಹೊಸದುರ್ಗ ಸಮೀಪಿಸುತ್ತಿದ್ದಂತೆ ಆರೋಪಿಗಳು ಅಸಭ್ಯವಾಗಿ ವರ್ತಿಸಿ ಕಿರುಕುಳ ನೀಡಲು ಯತ್ನಿಸಿದ್ದರು. ತಕ್ಷಣ ಎಚ್ಚೆತ್ತ ಸಂತ್ರಸ್ತೆಯರು ರೈಲ್ವೆ ಭದ್ರತಾ ಪಡೆಗೆ ಮಾಹಿತಿ ನೀಡಿದ್ದು, ಪೊಲೀಸರ ತ್ವರಿತ ಕಾರ್ಯಾಚರಣೆಯಿಂದ ಆರೋಪಿಗಳನ್ನು ಬಂಧಿಸಲಾಗಿದೆ.

ಬಳಿಕ ಇವರನ್ನು ಹೊಸದುರ್ಗ ಮೆಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

