ಓಂ ಶ್ರೀ ಸಾಯಿರಾಂ
“ಜ್ಞಾನಭಂಡಾರದಲಿ ವಜ್ರವ,ಮುತ್ತುರತ್ನವ ಪೋಣಿಸಿದ ಅಕ್ಷರಧಾರೆ ಪರಿಚಯಿಸಿದ ಗುರುಗಳು,ಸಹಾನುಭೂತಿಯ ದ್ಯೋತಕ, ನಿಷ್ಟೆಯಿಂದ ತನ್ನ ಕಾರ್ಯವನ್ನು ಸಫಲತೆಯ ಕಡೆಗೆ ಸಾಗಿಸುವ ಪ್ರಯತ್ನ,ಶ್ರಮಿಸಿದರೆ ಯಾವ ಕಾರ್ಯವೂ ಕಠಿಣವಲ್ಲ ಎಂದು ಮನದಟ್ಟು ಮಾಡುವ ಯುವ ಹುಮ್ಮಸ್ಸು,ಸಹೃದಯಿ,ಮನುಷ್ಯ ಸ್ವಭಾವದ ಮನಸ್ಸಿಗೆ ನಿಮ್ಮ ಸೇವಾಮನೋಭಾವ ವೇ ಮಾದರಿ. ಸತತ ಪರಿಶ್ರಮ ದ ಉತ್ತುಂಗ ಆಲೋಚನೆಯ ನಿಮ್ಮ ವಿದ್ಯಾಕ್ಷೇತ್ರದ ಸೇವೆ ಅಪಾರ. ನಿಮ್ಮ ಕಠಿಣ ಪರಿಶ್ರಮದ ರೀತಿನೀತಿ ಅನುಸರಿಸಿದರೆ ವಿದ್ಯಾರ್ಥಿ ಜೀವನದಲ್ಲೂ ಉನ್ನತಿಯ ಸ್ಥಾನ ಅಲಂಕರಿಸಬಲ್ಲ ಎಂದರೆ ಸಂಶಯವಿಲ್ಲ.ನಿಮ್ಮ ಜೊತೆ ಸೇವೆ ಮಾಡಿದ ಸಮಯ ಕಡಿಮೆಯಾದರೂ ಅಪಾರ ಜ್ಞಾನದ ತಂತ್ರಾಂಶವನ್ನು ಅರಿತು ಹೊಸ ಆಲೋಚನೆಗೆ ನೀವೇ ಮಾದರಿ.”,ಎಂದು ಕೈಮುಗಿದು ಪಾದಕ್ಕೆ ಬಿದ್ದ ಶಿಷ್ಯನನ್ನು ಕಂಡು ಗುರು ಒಂದು ಮಾತು ಹೇಳಿದರು”ದೇವರಿಗಿಲ್ಲ ಗುರು-ದಕ್ಷಿಣೆ:ಆದರೂ ಬರುವರಲ್ಲ ಪ್ರದಕ್ಷಿಣೆ!” ಈ ಮಾತು ಕೇಳಿ ನನಗಂತೂ ಮತ್ತೂ ಕುತೂಹಲ. ದೇವರೇ ಗುರುವಾಗಿರುವಾಗ, ದೇವರೇ ಸಕಲ ಐಶ್ವರ್ಯ ನೀಡಿ ನಮ್ಮನ್ನು ರಕ್ಷಿಸುವಾಗ, ನಾವೆಲ್ಲ ಅವನಿಗೆ ಶರಣಾದಾಗ ನಮ್ಮ ಮನಸ್ಸು ಭಕ್ತಿಯ ಪರಕಾಷ್ಟೆಯಿಂದ ನೋಡಿದರೆ ಸತ್ಯವಾದ ಮಾತು, ಅರ್ಥಭರಿತ ಮಾತು.
ದೇವರ ಹೆಸರಲ್ಲಿ ತಾನು ತನ್ನ ಕರ್ತವ್ಯ ಮಾಡದೆ ಹೊಗಳಿಕೊಳ್ಳುವ, ನಾನು ಪರಮ ಭಕ್ತ ಎಂದು ಬೀಗುವ ಢಾoಭಿಕ ಭಕ್ತನಿಗೆ ಕೆಲವೇ ದಿನ ಅಧಿಕಾರದ ಪುರಸ್ಕಾರ. ಕರ್ತ್ಯವ್ಯ ನಿಷ್ಠೆಯಿಂದ ದುಡಿಯುವ ನಿಜ ಭಕ್ತನಿಗೆ ಆ ದೇವರೇ ಕೈಹಿಡಿದು ನಡೆಸುವಾತ,ತನ್ನ ಕಷ್ಟಗಳೆನ್ನೆಲ್ಲ ಪರಿಹರಿಸುವಂತೆ ಪ್ರದಕ್ಷಿಣೆ ಬರುತ್ತಾನೆ.ಇಂತಹ ನಿಸ್ವಾರ್ಥ ಸೇವೇಯಿಂದ ವಿರಮಿಸುವ ಸಂದರ್ಭದಲ್ಲಿ ಮಾತುಗಳೇ ಬಾರದು.ಯಾಕೆಂದರೆ ನಾನು ದೇವರೆಂದು ನಂಬಿದ ನನ್ನ ಗುರುಗಳಿಗೆ ಪ್ರದಕ್ಷಿಣೆ ಬಂದಿದ್ದೇನೆ .ಆದರ್ಶ ಗುರುಗಳು ಆದರ್ಶ ವ್ಯಕ್ತಿ ತ್ವ ಇನ್ನು ಸಿಗುವುದೇ ವಿರಳ.ನಾನು ಕಂಡ ಗುರುಗಳಾದರೆ ಸಾಯಿರಾಮ್ ಎಂದು ಮಕ್ಕಳಲ್ಲಿ ಮಕ್ಕಳಾಗಿ ಬೆರೆಯುವ ಹೃದಯವಂತ ಶ್ರೇಷ್ಠರು. ಬಾಬಾರವರ ಒಂದು ಮಾತಿದೆ “
“ಗುರು” ಎಂದರೆ ಕೇವಲ ಶಿಕ್ಷಕರಲ್ಲ, ಆತ್ಮದ ಆಳವಾದ ಬೆಳಕು ತೋರಿಸುವ ಆತ್ಮಜ್ಞಾನಿಯಾಗಿದ್ದಾರೆಂದು ನಿರೂಪಿಸಿದ್ದಾರೆ .
ಶಿಷ್ಯರ ಪರಿಶೀಲನೆಗೆ
ಅವರು ಮಂತ್ರವನ್ನು ಗ್ರಹಿಸಲು ಮೊದಲು ಶಿಷ್ಯನ ಶ್ರದ್ಧೆ, ನಿಷ್ಠೆ ಹಾಗೂ ಗುರುತ್ವಾರ್ಹತೆಯನ್ನು ಪರಿಶೀಲಿಸುತ್ತಾರೆ.
ಶಿಷ್ಯ–ಗುರು ಸಂಬಂಧವು ಅನುಯಾಯಿಗಳ ಆತ್ಮಶೋಧನೆಗೆ, ನೈತಿಕ ಬೆಳವಣಿಗೆಗೆ ಕಾರಣವಾಗಿ, ಶ್ರದ್ಧೆ ಮತ್ತು ಸೇವೆಯ ಮೂಲಕ ವ್ಯಕ್ತಿಗಳನ್ನು ಪರಿವರ್ತಿಸುತ್ತದೆ .
ಒಬ್ಬ ಶಿಷ್ಯ ಹೃದಯದಲ್ಲಿ “ಗುರು” ಎಂಬ ಆತ್ಮದ ಬೆಳಕನ್ನು ಕಂಡು, ತಮ್ಮೊಳಗೇ ದೀಕ್ಷಿತಾನಂದ ದಂತೆ ಅನುಭವಿಸಿದ ದಿನಗಳು ಶ್ರೇಷ್ಠ.
ಗುರು ಆತ್ಮದ ಉತ್ತುಂಗಕ್ಕೆ ದೀಪ ಹಚ್ಚುವ ದಿವ್ಥಾತ್ಮಿಕ ಸ್ಥಿತಿ, ರೂಪವಲ್ಲದೆ ಚೈತನ್ಯದ ಪ್ರತಿಬಿಂಬ
ಶಿಷ್ಯರ ಗುಣಧರ್ಮ ಶ್ರದ್ಧೆ, ನಿಸ್ವಾರ್ಥ ಬೋಧನೆ, ಮುಕ್ತ ಇಚ್ಛೆ—ಇವು ಶಿಷ್ಯತ್ವಕ್ಕಾಗುವ ಪದಕಗಳು.ಆದರೆ ಕಾರ್ಯರೂಪದಲ್ಲಿ ತರುವುದಾದರೆ ಮಾತ್ರ ಈ ಮಾತಿಗೆ ಬೆಲೆ ಇದೆ. ಢಾoಬಿಕಾ ಭಕ್ತನಿಗೆ ಇದು ಒಂದು ಸುಲಭ ಮಾರ್ಗ ಎಂದು ದುರುಪಯೋಗ ಪಡಿಸಬಾರದು. ಆತ್ಮ ತೃಪ್ತಿ ಯಿಂದ ಬದುಕನ್ನು ಕಾಣುವoತಾಗಬೇಕು.ನಿಜವಾದ ಗುರು ಶಿಷ್ಯರ ಬೆಳವಣಿಗೆ ಕಂಡು ತನ್ನ ನಿಸ್ವಾರ್ಥ ಕರ್ತವ್ಯ, ಸೇವೆ ಸಾರ್ಥಕ ವಾಯಿತು ಎಂದು ಭಗವಂತನಿಗೆ ಶರಣಾಗಬೇಕು.ಗುರು ಅಂದರೆ ಈ ಅರ್ಥದಿಂದ ತಿಳಿಯುವುದಾದಾದರೆ ದಕ್ಷಿಣೆ ಅಂದರೆ..?
ಭೂಮಿತಾಯಿ ನೀಡಿದ ಸಕಲ ಸೌಕರ್ಯವನ್ನೆಲ್ಲಾ ತನ್ನದಾಗಿಸಿ,ಮತ್ತೆ ಇದ್ದದ್ದೆಲ್ಲವನ್ನು ತನಗಾಗಿ ಕೂಡಿಟ್ಟು ಸುಖೀ ಜೀವನವನ್ನು ಸಾಗುವ ಕನಸು ಹೊತ್ತ ಮಾನವ.ಸಾಲದ ಹೊರೆಯನ್ನು ಹೊತ್ತರೂ ತಿರುಗಿ ಕೊಡದೆ ಆಸೆಬುರುಕನಾದ.ನನಗೇನು ಸಿಗುವುದು ಎನ್ನುವ ಆಲೋಚನೆ ಮಾತ್ರವಲ್ಲದೆ ನಾನೇನು ಕೊಡುವುದು ಎನ್ನುವ ಸಹಾನುಭೂತಿಯಿರದ ಮನಸ್ಸೇ ಹೆಚ್ಚು. ತನ್ನ ಕರ್ತವ್ಯ ಮಾಡಿದಾಗ ತನಗೆಷ್ಟು ಲಾಭ ಇದೆ, ತನಗೆಷ್ಟು ಸಿಗಬಹುದು ಎಂದು ಕಳಿಸಿದ ಶಿಷ್ಯರಲ್ಲೂ ಒಂದು ಕಣ್ಣು ನೋಡುವವರಿದ್ದಾರೆ ಎಂಬುದೇ ಅತಿಶಯ.ದಕ್ಷಿಣೆ ಹೆಚ್ಚಾದರೆ ಪ್ರದಕ್ಷಿಣೆ ಸುತ್ತು ಹೆಚ್ಚು ಎನ್ನುವುದು ಕೆಲವು ಕಡೆ ಇದೆ ಎಂದು ಹೇಳುವವರಿದ್ದಾರೆ.ಎಲ್ಲವನ್ನು ಆ ಪರಮಾತ್ಮ ನೋಡುತ್ತಾ ಅಳತೆ ಮಾಡುತ್ತಿರುತ್ತಾನೆ ಎಂದಾದರೂ ನೆನಪಿರಲಿ.
‘ಪರಮಾತ್ಮ ನನ್ನು ಒಲಿಸು ಅವನೇ ನಮ್ಮನ್ನು ದಯಾ ಪಾಲಿಸಿ ಸಂರಕ್ಷಿಸುತ್ತಾನೆ ‘ಎಂದು ದಾಸರೇಣ್ಯರು, ಕವಿಪುಂಗವರು ಬರಹದಲಿ ಅಚ್ಚೊತ್ತಿ ಹೇಳಿದರೂ;ನಾವುಗಳು ಪರಮಾತ್ಮ ನ ಅಂಶ ಎಲ್ಲಿದೆ ಎಂದು ಹುಡುಕಿ ಅಲೆದಾಡಿ ಬರಿಗೈಯಲ್ಲೇ ಪರಮಾತ್ಮ ನ ಗುರುತಿಲ್ಲದೇ ಪರರ -ಆತ್ಮವಾಗಿಬಿಟ್ಟೆವಲ್ಲ! ಪರಮಾತ್ಮ ಗುರುವನರಿಯದೆ!.
ಜನ್ಮಕೊಟ್ಟ ತಂದೆತಾಯಿ ವಯಸ್ಸಾದರೆ ಕಾಣದ ಹಾಗೆ ನಟಿಸುವ ನಟರೇ ಇರುವಾಗ ಸಲಹಿ ಹೊತ್ತ ಭೂಮಿತಾಯಿಯ ಸೇವೆ ಮಾಡುವರೇ? ಚಿಂತಿಸಿ ಅವಲೋಕಿಸಿದಾಗ ಶಿಷ್ಯನ ಕರ್ತವ್ಯ ಕೇಳಿ ಅಭಿನಂದಿಸಿದೆ.ಭಾರತಮಾತೆಯ ಸೇವೆಗೆಂದೆ ಶ್ರಮಪಟ್ಟು ಕರ್ತವ್ಯ ಕ್ಕೆ ಹೆಜ್ಜೆ ಇಟ್ಟ ಶಿಷ್ಯ ಸೈನಿಕ,ಭರತಮಾತೆಯ ವೀರಪುತ್ರ ಯೋಧ ಸಂದೀಪ್ ಜೆ.
ಶಿವಮೊಗ್ಗ ಜಿಲ್ಲೆಯ ಸಾಮಾನ್ಯ ಕುಟುಂಬದಿಂದ ಜಯಸಿಂಹ ಮತ್ತು ಮಂಜುಳಾ ದಂಪತಿಯ ಹೆಮ್ಮೆಯ ಪುತ್ರನಾಗಿ,ಶಿವಕುಮಾರ್ ಪ್ರೀತಿಯ ಅಣ್ಣನಾಗಿ,ಜನಿಸಿ ನಾಡಿನ ಕೀರ್ತಿಯನ್ನು ದೇಶದುದ್ದಕ್ಕೂ ಪಸರಿಸಿದ ಧೀರ.
ಶಿವಮೊಗ್ಗದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ,ಹೆಚ್ಚಿನ ಶಿಕ್ಷಣಕ್ಕಾಗಿ ಕಷ್ಟಪಟ್ಟು ಸಂಬಂಧಿಕರಮನೆಯಲ್ಲಿ ಉಳಿದು ಪಿ ಯು ಸಿ ಮತ್ತು ಪದವಿಯನ್ನು ಅಮೃತ ಕಾಲೇಜಿನಲ್ಲಿ ಪಡೆದರು.
ಸಾಂಸ್ಕ್ರತಿಕ ಮತ್ತು ಕ್ರೀಡೆಯಲ್ಲಿ ಪರಿಣಿತನಾದ ಸಂದೀಪ್ ಎನ್ ಸಿ ಸಿ ಯಲ್ಲಿ ಶಾಲಾಜೀವನದಲ್ಲಿ ಇದ್ದಾಗ ಸೈನಿಕನಾಗ ಬೇಕೆಂಬ ಕನಸು ಹೊತ್ತಿದ್ದರು.ಹಲವಾರು ಪರೀಕ್ಷೆ ಗಳಲ್ಲಿ ಭಾಗವಹಿಸಿ ಶ್ರಮಪಟ್ಟು ಕೊನೆಗೆ ಭಾರತೀಯ ಸೇನೆಯಲ್ಲಿ ಆಯ್ಕೆಯಾಗಿ ಕನಸನ್ನು ನನಸಾಗಿಸಿದರು.
ಈಗ ಉತ್ತರಾಖಂಡದಲ್ಲಿ ಭರತಮಾತೆಯ ಸೇವೆಯ ಮೂಲಕ ಹೆಮ್ಮೆಯ ಸೈನಿಕನಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸಾಧಿಸಿದರೆ ಈ ರೀತಿ ಯ ಸಾಧನೆ ಬೇಕು,ಸೇವಾ ಮನೋಭಾವ ಇದ್ದರೆ ನೆಮ್ಮದಿಯ ಜೀವನ ಖಂಡಿತ.ನಾವು ಹಬ್ಬ ಹರಿದಿನಗಳಲ್ಲಿ ಸಂತೋಷವಾಗಿ ಆಚರಿಸಿ ಸಂಬ್ರಮಪಡಲು ಇವರ ನಿರಂತರ ಸೇವೆಯೇ ಕಾರಣ .ಪ್ರತಿಯೊಬ್ಬರು ಸೈನಿಕರಂತೆ ಸೇವಾ ಮನೋಭಾವ ಬೆಳೆಸಿದರೆ ಪ್ರತಿಯೊಬ್ಬರ ಜೀವನದಲ್ಲಿ ನೆಮ್ಮದಿಯ ಮತ್ತು ಗೌರವದ ಭಾವನೆ ಮೂಡುವುದರಲ್ಲಿ ಎರಡು ಮಾತಿಲ್ಲ.
ಭಾರತಾಂಬೆಯ ಎಲ್ಲಾ ಸೈನಿಕರನ್ನು ಗೌರವಿಸಿ ,ಹಾರೈಸಿ,ಬದಲಾಗಿ ಇತರರ ಸ್ಟೇಟಸ್ ಹಾಕಿ ವಿಚಾರ ಮಂಡಿಸುವುದರ ಬದಲು ಇಂತಹ ಧೀರ ಸೈನಿಕರ ವಿಚಾರವನ್ನು ತಿಳಿಸಿ,ಹೆಮ್ಮೆಯಿಂದ ಅವರಿಗೆ ಅಭಿನಂದನೆ ಸಲ್ಲಿಸಿ ಪೂಜಿಸಿ ಅದುವೇ ಪಾವನ ಜೀವನ.
ಕರ್ತವ್ಯದ ಶ್ರಮಜೀವಿ
ಸಂದೀಪ್ ಅನ್ನೋ ಧೀರ ಶಿಷ್ಯನ ಈ ಸೇವೆ ಸದಾ ಗೌರವದಿಂದ ಹೇಳಲು ಕಾರಣ, ಇವತ್ತಿನ ವೃತ್ತಿಯ ಬಗ್ಗೆ ಸ್ಪರ್ಧಾತ್ಮಕವಾಗಿ ಯೋಚನೆ ಮಾಡುವ ಯುವಕರಿಗೆ ಈ ಆಯ್ಕೆ ಯ ಬಗ್ಗೆ ,ಸೇವಾ ಮನೋಭಾವದ ಬಗ್ಗೆ ಸ್ವಲ್ಪವಾದರೂ ಜ್ಞಾನವಿರಲಿ.ದೇಶಸೇವೆಯೇ ಈಶಸೇವೆ ಎನ್ನುವ ಕಿಂಚಿತ್ ಚಿಂನೆಯಾದರೂ ಬರಲಿ ಎನ್ನುವ ಮನತೃಪ್ತಿಗಾಗಿ.
ಚಳಿಮಳೆಗಾಳಿಗೆ ಕಡುಬಿಸಿಲಿಗೆ ಗಡಿಕಾಪಾಡುವ ಎಲ್ಲಾ ವೀರ ಸೈನಿಕರಿಗೆ ಸಮರ್ಪಣೆ ಈ ಬರಹ, ಗೌರವದ ಅಭಿನಂದನೆ.
ಶಿಷ್ಯನಾದ ಸೈನಿಕ ಸಂದೀಪ್ ರಂತಹ ಕರ್ತವ್ಯ ನಿಷ್ಠೆ ಯ ಈ ಸೇವೆಯೇ ಶ್ರೇಷ್ಟ ಗುರುದಕ್ಷಿಣೆ.ಇದಕ್ಕಿಂತ ಬೇರೆ ಏನು ಬೇಕು.
ಗುರು-ದಕ್ಷಿಣೆ ಈ ತರ ಆದರೆ ದೇವರಿಗೆ ಪ್ರದಕ್ಷಿಣೆ ಬಂದದ್ದು ಸಾರ್ಥಕವಾಗುವುದಂತೂ ನೂರು ಶತಮಾನ ನಿಜ.
ಸದ್ಭಾವನೆ, ಸತ್ ಚಿಂತನೆ ಕರ್ತವ್ಯ ನಿಷ್ಟೆ, ಸ್ವಾಮಿ ಕಾರ್ಯದ ಹುಮ್ಮಸ್ಸು ಇರುವ ಶ್ರೀ ಗುರುವ ಹುಡುಕುತ ಮುಂದೆ…… ದಾಕ್ಷಿಣ್ಯ ತೋರು ದಕ್ಷಿಣೆ ತಂದಿರುವೆ ತಂದೆ…….. ‘ತಂದೆ ತಾಯಿಯ ಪ್ರದಕ್ಷಿಣೆ ಬಂದು ಬಿಡು ನಿಜವಾದ ದೇವರು ಅವರೇ’ ಗುರು ಹೇಳಿದರು ಮುಂದೆ………!
✍️ನಿತ್ಯಾನಂದ ಕೆ ಆರ್.ಬೇಕೂರು.
ಕನ್ನಡ ಶಿಕ್ಷಕ