ಉಡುಪಿ: ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್‌ಗಳ ಅಭಾವದಿಂದಾಗಿ ಉಡುಪಿಯಲ್ಲಿ 150ಕ್ಕೂ ಹೆಚ್ಚು ಹೊಟೇಲ್‌ಗಳು ಬಂದ್ ಆಗಿರುವ ಘಟನೆ ನಡೆದಿದೆ. ಕೃಷ್ಣನಗರಿ ಉಡುಪಿಗೆ ಪ್ರತಿದಿನ ವಿವಿಧ ಪ್ರದೇಶಗಳಿಂದ ಸುಮಾರು 600ಕ್ಕೂ ಹೆಚ್ಚು ಬಸ್‌ಗಳು ಆಗಮಿಸುತ್ತಿದ್ದು, ಸಾವಿರಾರು ಪ್ರವಾಸಿಗರಿಗೆ ಊಟ-ತಿಂಡಿ ಸಿದ್ಧಪಡಿಸುವ ಹೊಣೆಗಾರಿಕೆ ಹೊಟೇಲ್‌ಗಳ ಮೇಲಿದೆ. ಆದರೆ ಗ್ಯಾಸ್ ಕೊರತೆಯಿಂದಾಗಿ ಆಹಾರ ಸಿದ್ಧಪಡಿಸುವುದು ಕಷ್ಟಕರವಾಗಿದೆ.


ಕೆಲವು ದಿನಗಳಿಂದ ಹೊಟೇಲ್‌ಗಳಲ್ಲಿ ಕುಚ್ಚಲಕ್ಕಿ ಅನ್ನ, ದೋಸೆ ಸೇರಿದಂತೆ ಕೆಲವು ತಿನಿಸುಗಳನ್ನು ಕೈಬಿಟ್ಟು ಸೀಮಿತವಾಗಿ ಹೊಟೇಲ್ ನಡೆಸಲಾಗುತ್ತಿತ್ತು. ಆದರೆ ಈಗ ಪರಿಸ್ಥಿತಿ ಗಂಭೀರವಾಗಿದ್ದು, 150ಕ್ಕೂ ಹೆಚ್ಚು ಹೊಟೇಲ್‌ಗಳಿಗೆ ಬೀಗ ಹಾಕಲಾಗಿದೆ. ಗ್ಯಾಸ್ ಪೂರೈಕೆ ಬೇಡಿಕೆಗೆ ತಕ್ಕಂತೆ ದೊರಕಿದರೆ ಮಾತ್ರ ಹೊಟೇಲ್‌ಗಳನ್ನು ಮತ್ತೆ ತೆರೆಯಲು ಸಾಧ್ಯವೆಂದು ಹೊಟೇಲ್ ಮಾಲೀಕರು ತಿಳಿಸಿದ್ದಾರೆ.


ಕೆಲವು ಹೊಟೇಲ್‌ಗಳಲ್ಲಿ ಕಟ್ಟಿಗೆ ಬಳಸಿ ಅಡುಗೆ ಮಾಡಲು ಪ್ರಯತ್ನಿಸಿದರೂ ಕಾರ್ಮಿಕರ ಕೊರತೆ ಮತ್ತು ಸೌದೆ ಲಭ್ಯತೆ ಕಡಿಮೆಯಿರುವುದು ಮತ್ತೊಂದು ಸಮಸ್ಯೆಯಾಗಿದೆ. ನಗರ ಪ್ರದೇಶದಲ್ಲಿ ಸೌದೆ ಮಾರಾಟಗಾರರ ಸಂಖ್ಯೆ ಕಡಿಮೆ ಇದ್ದು, ಅದರ ಬೆಲೆಯೂ ಹೆಚ್ಚಾಗಿದೆ. ಒಟ್ಟಾರೆ ವಾಣಿಜ್ಯ ಗ್ಯಾಸ್ ಕೊರತೆ ಉಡುಪಿಯ ಹೊಟೇಲ್ ಉದ್ಯಮದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ.

