​ಮಂಜೇಶ್ವರ ಕುಂಡುಕೊಳಕೆ ಬೀಚ್: ಪ್ರವಾಸಿಗರ ಪಾಲಿಗೆ ಮೃತ್ಯುಕೂಪವಾಗುತ್ತಿದೆಯೇ ಈ ಕಿನಾರೆ?

​ಮಂಜೇಶ್ವರ: ಶಾಲಾ ರಜೆ ಅವಧಿಯಾದ್ದರಿಂದ ಮಂಜೇಶ್ವರದ ಪ್ರಸಿದ್ಧ ಕುಂಡುಕೊಳಕೆ ಬೀಚ್‌ಗೆ ಪ್ರತಿದಿನ ಸಾವಿರಾರು ಪ್ರವಾಸಿಗರು ಮತ್ತು ಕುಟುಂಬಗಳು ಆಗಮಿಸುತ್ತಿದ್ದಾರೆ. ಆದರೆ, ಕನಿಷ್ಠ ಭದ್ರತಾ ವ್ಯವಸ್ಥೆಯೂ ಇಲ್ಲದ ಕಾರಣ ಈ ಸುಂದರ ಕಿನಾರೆ ಇದೀಗ ಪ್ರಾಣಭಯ ಹುಟ್ಟಿಸುವ ತಾಣವಾಗಿ ಮಾರ್ಪಟ್ಟಿದೆ.

ಬುಧವಾರ ಸಂಜೆ ಸಂಭವಿಸಿದ ದುರಂತದಲ್ಲಿ 18 ವರ್ಷದ ಝೈನುಲ್ ಹಾಬಿದ್ ಸಮುದ್ರ ಪಾಲಾಗಿದ್ದು, ಈತನ ಪತ್ತೆಗಾಗಿ ಶೋಧ ಕಾರ್ಯ ತೀವ್ರಗೊಂಡಿದ್ದರೂ ಇನ್ನು ಸುಳಿವು ಲಭ್ಯವಾಗಿಲ್ಲ. ಇದು ಕೇವಲ ಒಂದು ಆಕಸ್ಮಿಕವಲ್ಲ, ಇಲ್ಲಿನ ಭದ್ರತಾ ವೈಫಲ್ಯಕ್ಕೆ ಬಲಿಯಾದ ಮತ್ತೊಂದು ಜೀವ. ಪ್ರತಿಯೊಂದು ಅನಾಹುತ ನಡೆದಾಗಲೂ ಜನಪ್ರತಿನಿಧಿಗಳು ಮತ್ತು ಸ್ಥಳೀಯಾಡಳಿತ ಭರವಸೆಗಳ ಮಹಾಪೂರವನ್ನೇ ಹರಿಸುತ್ತಾರೆ, ಆದರೆ ಕಾರ್ಯರೂಪಕ್ಕೆ ಬರುವಲ್ಲಿ ಶೂನ್ಯ ಫಲಿತಾಂಶ ಕಂಡುಬರುತ್ತಿದೆ.

ವಿಳಂಭ ಮಾಡದೆ ಲೈಫ್ ಗಾರ್ಡ್‌ಗಳನ್ನು ಕೂಡಲೇ ನೇಮಕ ಗೊಳಿಸಬೇಕು, ಅಹಿತಕರ ಘಟನೆ ತಡೆಯಲು ಬೀಚ್ ವ್ಯಾಪ್ತಿಯಲ್ಲಿ ಪೊಲೀಸ್ ಸಾನ್ನಿಧ್ಯವಿರಬೇಕು,ಅಪಾಯಕಾರಿ ಸುಳಿ ಹಾಗೂ ಸಮುದ್ರದ ಆಳದ ಬಗ್ಗೆ ಸ್ಪಷ್ಟ ಮಾಹಿತಿ ನೀಡುವ ಬೋರ್ಡ್‌ಗಳನ್ನು ಅಳವಡಿಸಬೇಕು, ತುರ್ತು ಸಂದರ್ಭದಲ್ಲಿ ಬಳಸಲು ಲೈಫ್ ಜಾಕೆಟ್ ಮತ್ತು ಬೋಟ್‌ಗಳ ಲಭ್ಯತೆ ಇರಬೇಕೆಂಬುದು ಸ್ಥಳೀಯರ ಬೇಡಿಕೆ.



ರಜಾ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ದುಪ್ಪಟ್ಟಾಗುತ್ತಿದ್ದರೂ, ಸಂಬಂಧಪಟ್ಟ ಇಲಾಖೆಗಳು ಕಣ್ಣಿದ್ದೂ ಕುರುಡನಂತೆ ವರ್ತಿಸುತ್ತಿರುವುದು ಸಾರ್ವಜನಿಕರ ಕೆಂಡಮಂಡಲಕ್ಕೆ ಕಾರಣವಾಗಿದೆ. “ಜೀವ ಹೋದ ಮೇಲೆ ಭರವಸೆ ನೀಡುವುದಕ್ಕಿಂತ, ಜೀವ ಹೋಗದಂತೆ ತಡೆಯುವ ಮುಂಜಾಗ್ರತಾ ಕ್ರಮಗಳು ನಮಗೆ ಬೇಕು” ಎಂಬುದು ಇಲ್ಲಿನ ನಿವಾಸಿಗಳ ಆಕ್ರೋಶ ನುಡಿ.

ಮಂಜೇಶ್ವರ ಬೀಚ್ ಅನ್ನು ಕೇವಲ ಪ್ರವಾಸಿ ತಾಣವಾಗಿ ಮಾತ್ರವಲ್ಲದೆ, ಸುರಕ್ಷಿತ ಕುಟುಂಬ ಸ್ನೇಹಿ ತಾಣವನ್ನಾಗಿ ರೂಪಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಇನ್ನಷ್ಟು ಅನಾಹುತಗಳು ಸಂಭವಿಸುವ ಮೊದಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ತುರ್ತು ಕ್ರಮ ಕೈಗೊಳ್ಳಬೇಕಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!