ಮಂಗಳೂರು: ‘ಬುರುಡೆ ಗ್ಯಾಂಗ್’ ಪ್ರಹಸನ ವಿಚಾರ—ಕಲಾವಿದರ ವಿರುದ್ಧ ನಿಂದನೆ; ಕ್ರಮಕ್ಕೆ ಆಗ್ರಹ

ಮಂಗಳೂರು: ಸ್ಥಳೀಯ ವಾಹಿನಿಯ ‘ಯಕ್ಷ ತೆಲಿಕೆ’ ಕಾರ್ಯಕ್ರಮ ಸರಣಿಯಲ್ಲಿ ಪ್ರಸಾರವಾದ ‘ಬುರುಡೆ ಗ್ಯಾಂಗ್’ ಯಕ್ಷ ಪ್ರಹಸನಕ್ಕೆ ಸಂಬಂಧಿಸಿ ಕಲಾವಿದರಿಗೆ ಅವಾಚ್ಯವಾಗಿ ನಿಂದನೆ ಮಾಡಿದ ಪ್ರಕರಣದ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಯಕ್ಷಗಾನ ಕಲಾವಿದರು ಒತ್ತಾಯಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುಂದರ ರೈ ಮಂದಾರ, ಮಹೇಶ್ ಶೆಟ್ಟಿ ತಿಮರೋಡಿ ಎಂಬವರು ದೂರವಾಣಿ ಮೂಲಕ ಅವಾಚ್ಯವಾಗಿ ನಿಂದಿಸಿರುವುದಾಗಿ ಆರೋಪಿಸಿದರು. ಈ ಕುರಿತು ಪುತ್ತೂರು ಗ್ರಾಮಾಂತರ ಠಾಣೆ ಹಾಗೂ ಮಹಿಳಾ ಠಾಣೆಗೆ ಈಗಾಗಲೇ ದೂರು ಸಲ್ಲಿಸಲಾಗಿದ್ದು, ಸಂಬಂಧಪಟ್ಟವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದರು.

ಕಳೆದ ವರ್ಷದ ನವೆಂಬರ್‌ನಲ್ಲಿ ಈ ಪ್ರಹಸನ ಪ್ರಸಾರವಾದ ಬಳಿಕ ಸಾಮಾಜಿಕ ಜಾಲತಾಣಗಳ ಮೂಲಕ ಅಪರಿಚಿತರಿಂದಲೂ ಅವಾಚ್ಯ ಕರೆಗಳು ಬಂದಿದ್ದವು. ಇತ್ತೀಚೆಗೆ ಏಪ್ರಿಲ್ 11ರಂದು ಪ್ರಜ್ವಲ್ ಕುಮಾರ್ ಅವರಿಗೆ ಕರೆ ಮಾಡಿದ ಮಹೇಶ್ ಶೆಟ್ಟಿ ತಿಮರೋಡಿ ಅವರು ತಾಯಿಯ ಕುರಿತು ಸಹ ಅಸಭ್ಯವಾಗಿ ಮಾತನಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಜ್ವಲ್ ಕುಮಾರ್ ಮಹಿಳಾ ಠಾಣೆಗೆ ದೂರು ನೀಡಿದ್ದು, ತಮ್ಮ ಮೇಲೂ ಸುಳ್ಳು ಆರೋಪಗಳನ್ನು ಮಾಡಿರುವುದಾಗಿ ತಿಳಿಸಿ ಗ್ರಾಮಾಂತರ ಠಾಣೆಗೆ ದೂರು ಸಲ್ಲಿಸಿದ್ದೇನೆ ಎಂದು ಸುಂದರ ರೈ ಮಂದಾರ ತಿಳಿಸಿದರು.

ಪ್ರಜ್ವಲ್ ಕುಮಾರ್ ಮಾತನಾಡಿ, “ಒಬ್ಬ ಹೆಣ್ಣಿಗೆ ನ್ಯಾಯಕ್ಕಾಗಿ ಹೋರಾಟ ನಡೆಸುವ ವ್ಯಕ್ತಿ, ಅದೇ ನೆಪದಲ್ಲಿ ಇತರ ಮಹಿಳೆಯರ ಬಗ್ಗೆ ಅವಾಚ್ಯವಾಗಿ ಮಾತನಾಡುವುದು ಎಷ್ಟರ ಮಟ್ಟಿಗೆ ಸಮಂಜಸ?” ಎಂದು ಪ್ರಶ್ನಿಸಿದರು. ನಮ್ಮ ಪ್ರಹಸನಕ್ಕೂ ಯಾವುದೇ ಹೋರಾಟಗಳಿಗೂ ಸಂಬಂಧವಿಲ್ಲದಿದ್ದರೂ, ಅದನ್ನು ತಮ್ಮೊಂದಿಗೆ ಸಂಬಂಧಿಸಿದಂತೆ ತೋರಿಸಿ ನಮ್ಮ ವಿರುದ್ಧ ಆರೋಪ ಮಾಡಲಾಗುತ್ತಿದೆ. ಕಾನೂನಿನ ಮೇಲೆ ನಮಗೆ ಪೂರ್ಣ ನಂಬಿಕೆ ಇದ್ದು, ನ್ಯಾಯ ದೊರೆಯಲಿದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

ದಿನೇಶ್ ಕೊಡಪದವು ಮಾತನಾಡಿ, ಪ್ರಹಸನ ಪ್ರಸಾರವಾಗಿ ಆರು ತಿಂಗಳು ಕಳೆದಿದ್ದರೂ ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆಗಳು ಮುಂದುವರಿದಿವೆ. ಆದರೆ ಇದುವರೆಗೆ ನಾವು ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ‘ಬುರುಡೆ ಗ್ಯಾಂಗ್’ ಎಂಬ ಪದ ಬಳಕೆಗೆ ಯಾರಿಗಾದರೂ ಆಕ್ಷೇಪವಿದ್ದರೆ, ಅದನ್ನು ತಮ್ಮೊಂದಿಗೆ ಜೋಡಿಸಿಕೊಳ್ಳುವುದೇಕೆ ಎಂಬ ಪ್ರಶ್ನೆ ಉದ್ಭವಿಸುತ್ತದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಭಾಗವತ ಧೀರಜ್ ರೈ ಸಂಪಾಜೆ ಸೇರಿದಂತೆ ಇತರರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!