ಬೇಕೂರಿನಲ್ಲಿ ಪೈಪ್‌ಲೈನ್ ಸ್ಫೋಟ – ಮಿನಿ ಪ್ರವಾಹ, ಮನೆಗೆ ಹಾನಿ, ನೀರು ಸರಬರಾಜು ಸ್ಥಗಿತದ ಭೀತಿ

ಬೇಕೂರು: ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ವಿವಿಧ ವಾರ್ಡ್‌ಗಳಿಗೆ ನೀರು ಸರಬರಾಜು ಮಾಡುವ ಬೇಕೂರಿನ ಜಲಸಂಪನ್ಮೂಲ ಘಟಕದಲ್ಲಿ ಇಂದು ಬೆಳಗ್ಗೆ ಭಾರೀ ಅವಘಡ ಸಂಭವಿಸಿದೆ. ಬೇಕೂರು ಮಿಲ್ ಸಮೀಪದಲ್ಲಿರುವ ಚೆಂಬರ್‌ನಲ್ಲಿ ಪೈಪ್‌ಲೈನ್ ತುಂಡಾಗಿ, ದೊಡ್ಡ ಪ್ರಮಾಣದ ನೀರು ಹೊರಹರಿದು ಮಿನಿ ಪ್ರವಾಹದಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಘಟನೆ ಇಂದು ಬೆಳಗ್ಗೆ ಸುಮಾರು 8 ಗಂಟೆಯ ವೇಳೆಗೆ ಸಂಭವಿಸಿದ್ದು, ಸ್ಥಳೀಯ ಸ್ಕ್ರಾಪ್ ಅಂಗಡಿ ಮಾಲೀಕ ಗಫೂರ್ ಅವರ ಮನೆಗೆ ನೀರು ನುಗ್ಗಿ, ಹಿತ್ತಲಿನಲ್ಲಿದ್ದ ಮರಗಿಡಗಳು ಹಾಗೂ ಅನೇಕ ವಸ್ತುಗಳು ಸಂಪೂರ್ಣ ಹಾನಿಗೊಳಗಾಗಿವೆ. ಇದರಿಂದ ಅವರಿಗೆ ಭಾರೀ ಆರ್ಥಿಕ ನಷ್ಟ ಉಂಟಾಗಿದೆ.

ಘಟನೆಯ ಕುರಿತು ತಕ್ಷಣವೇ ವಾಟರ್ ಆಥೋರಿಟಿ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದರೂ, ಸಮಯಕ್ಕೆ ಸರಿಯಾಗಿ ಪ್ರತಿಕ್ರಿಯೆ ಸಿಗಲಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಪರಿಣಾಮವಾಗಿ, ನೀರಿನ ಪ್ರವಾಹವನ್ನು ತಡೆಯಲು ಗ್ರಾಮಸ್ಥರು ಸ್ವತಃ ಹರಸಾಹಸ ಪಟ್ಟು ಪ್ರಯತ್ನಿಸಿದರು.

ಸ್ಥಳಕ್ಕೆ ಬೇಕೂರು ವಾರ್ಡ್ ಸದಸ್ಯ ರವೀಂದ್ರ ಶೆಟ್ಟಿ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿ ಮಾಹಿತಿ ಸಂಗ್ರಹಿಸಿದರು. ಪ್ರಾಥಮಿಕ ಅಂದಾಜಿನ ಪ್ರಕಾರ, ಹೆಚ್ಚಿನ ನೀರಿನ ಒತ್ತಡದಿಂದ ಮುಖ್ಯ ಪೈಪ್‌ಲೈನ್ ಸ್ಫೋಟಗೊಂಡಿರುವುದೇ ಈ ಅವಘಡಕ್ಕೆ ಕಾರಣವಾಗಿರಬಹುದು ಎಂದು ಹೇಳಲಾಗಿದೆ.

ಈ ದುರಂತದಿಂದ ನೀರು ಸರಬರಾಜು ವ್ಯತ್ಯಯಗೊಳ್ಳುವ ಸಾಧ್ಯತೆ ಹೆಚ್ಚಿದ್ದು, ಈಗಾಗಲೇ ಬಿಸಿಲಿನ ತಾಪಮಾನ ಏರಿಕೆ ಹಾಗೂ ನೀರಿನ ಕೊರತೆಯಿಂದ ಬಳಲುತ್ತಿರುವ ಗ್ರಾಮಸ್ಥರಿಗೆ ಇದು ಮತ್ತಷ್ಟು ಸಂಕಷ್ಟ ತಂದೊಡ್ಡಿದೆ.

ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಸಮಸ್ಯೆಯನ್ನು ಶೀಘ್ರದಲ್ಲಿ ಪರಿಹರಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

SHARE
Loading spinner

3 thoughts on “ಬೇಕೂರಿನಲ್ಲಿ ಪೈಪ್‌ಲೈನ್ ಸ್ಫೋಟ – ಮಿನಿ ಪ್ರವಾಹ, ಮನೆಗೆ ಹಾನಿ, ನೀರು ಸರಬರಾಜು ಸ್ಥಗಿತದ ಭೀತಿ

Leave a Reply

Your email address will not be published. Required fields are marked *

error: Content is protected !!