ಮಂಗಳೂರು ಅಭಿವೃದ್ಧಿಗೆ ₹200 ಕೋಟಿ ಅನುದಾನ: ನಗರ ವಿಕಾಸ ಯೋಜನೆಗೆ ವೇಗ

ಮಂಗಳೂರು, ಏಪ್ರಿಲ್ 18: ರಾಜ್ಯದಲ್ಲಿ ಮಹಾತ್ಮಗಾಂಧಿ ನಗರ ವಿಕಾಸ ಯೋಜನೆಯಡಿ ನಗರಾಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ₹2,600 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ತಿಳಿಸಿದ್ದಾರೆ.

ನಗರದ ಉರ್ವಸ್ಟೋರ್‌ನ ಡಾ. ಬಿ.ಆರ್. ಅಂಬೇಡ್ಕರ್ ಭವನ ನಲ್ಲಿ ಮಂಗಳೂರು ಮಹಾನಗರ ಪಾಲಿಕೆಯ 25 ಕಾಮಗಾರಿಗಳಿಗೆ ಶಿಲಾನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಹಾತ್ಮಗಾಂಧಿ ನಗರ ವಿಕಾಸ ಯೋಜನೆ (ಹಂತ–2) ಅಡಿಯಲ್ಲಿ ಜಿಎಸ್‌ಟಿ ಸೇರಿ ₹200 ಕೋಟಿ ಅನುದಾನವನ್ನು ಮಂಗಳೂರು ಮಹಾನಗರ ಪಾಲಿಕೆಗೆ ನೀಡಲಾಗಿದೆ ಎಂದರು.

ರಾಜ್ಯದಲ್ಲಿ ಸಮಗ್ರ ನಗರಾಭಿವೃದ್ಧಿಗಾಗಿ ₹24,000 ಕೋಟಿ ಮಂಜೂರಾಗಿದ್ದು, ದೇಶದಲ್ಲಿ ಹೆಚ್ಚು ತೆರಿಗೆ ಪಾವತಿಸುವ ರಾಜ್ಯಗಳಲ್ಲಿ ಕರ್ನಾಟಕ ಪ್ರಮುಖ ಸ್ಥಾನದಲ್ಲಿದೆ. ಆದರೆ ಪಾವತಿಸುವ ತೆರಿಗೆಯಲ್ಲಿ ಕೇವಲ 10–12 ಶೇಕಡಾ ಮಾತ್ರ ರಾಜ್ಯಕ್ಕೆ ಹಿಂತಿರುಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ರಾಜ್ಯದ 13 ಮಹಾನಗರ ಪಾಲಿಕೆಗಳಿಗೆ ಸಮಾನವಾಗಿ ಅನುದಾನ ಹಂಚಿಕೆ ಮಾಡಲಾಗಿದ್ದು, ಮಂಗಳೂರು ನಗರದ ಒಳಚರಂಡಿ ಕಾಮಗಾರಿಗೆ ಈಗಾಗಲೇ ₹40 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಮಂಗಳೂರು ಅಭಿವೃದ್ಧಿಗೆ ₹165 ಕೋಟಿ ವಿಶೇಷ ಅನುದಾನ ನೀಡಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು. ಜಿಲ್ಲೆಯಲ್ಲಿ ₹100 ಕೋಟಿ ವೆಚ್ಚದಲ್ಲಿ ಐಟಿ ಪಾರ್ಕ್ ಸ್ಥಾಪನೆಗೆ ಯೋಜನೆ ರೂಪಿಸಲಾಗಿದ್ದು, ಕರಾವಳಿ ರಸ್ತೆ ಅಭಿವೃದ್ಧಿ ಹಾಗೂ ನದಿ ಪ್ರದೇಶಗಳ ಅತಿಕ್ರಮಣ ತಡೆಯಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಇದಲ್ಲದೆ, ವೆನ್ಲಾಕ್ ಆಸ್ಪತ್ರೆ ಯಲ್ಲಿ ₹70 ಕೋಟಿ ವೆಚ್ಚದಲ್ಲಿ ಓಪಿಡಿ ಬ್ಲಾಕ್ ನಿರ್ಮಾಣವಾಗಲಿದ್ದು, ಕುದ್ಮಲ್ ರಂಗರಾವ್ ಸ್ಮಾರಕ ಹಾಗೂ ಅಂಬೇಡ್ಕರ್ ವೃತ್ತ ಅಭಿವೃದ್ಧಿಗೂ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಮಂಗಳೂರು ನಗರದ ಒಳಚರಂಡಿ ವ್ಯವಸ್ಥೆಗೆ ₹1,000 ಕೋಟಿ ಅನುದಾನ ನೀಡುವಂತೆ ಆಗ್ರಹಿಸಿದರು. ಹಿಂದಿನ ಅವಧಿಯಲ್ಲಿ ನಿಂತಿದ್ದ ಕಾಮಗಾರಿಗಳನ್ನು ಪುನರಾರಂಭಿಸಲು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮಾಜಿ ಶಾಸಕ ಜೆ.ಆರ್. ಲೋಬೊ ಸೇರಿದಂತೆ ಹಲವರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!