ರಸ್ತೆಯಲ್ಲೇ ಬಸ್ ನಿಲುಗಡೆ: ತಲಪಾಡಿಯಲ್ಲಿ ತಪ್ಪದ ಅಪಘಾತದ ಭೀತಿ – ಬಸ್ ಚಾಲಕರ ವಿರುದ್ಧ ಕ್ರಮಕ್ಕೆ ಸ್ಥಳೀಯರ ಆಗ್ರಹ.

​ಮಂಜೇಶ್ವರ: ಕೇರಳ-ಕರ್ನಾಟಕ ಗಡಿ ಭಾಗವಾದ ತಲಪಾಡಿಯ ಕೇರಳ ಖಾಸಗಿ ಬಸ್ಸು ನಿಲ್ದಾಣದಲ್ಲಿ ಬಸ್ಸುಗಳನ್ನು ರಸ್ತೆಯಲ್ಲೇ ಅಡ್ಡಾದಿಡ್ಡಿಯಾಗಿ ನಿಲುಗಡೆಗೊಳಿಸುತ್ತಿರುವ ಪರಿಣಾಮ, ಸಾರ್ವಜನಿಕರು ಹಾಗೂ ವಾಹನ ಸವಾರರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಬಸ್ಸುಗಳನ್ನು ನಿಲುಗಡೆಗೆ ನೀಡಿದ ನಿಲ್ದಾಣದ ಒಳಗೆ ರಸ್ತೆಯಲ್ಲೇ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸುತ್ತಿರುವುದು ದೊಡ್ಡ ಅಪಘಾತಗಳಿಗೆ ಆಹ್ವಾನ ನೀಡುವಂತಿದೆ.

ಕುಂಜತ್ತೂರು ಹಾಗೂ ತೂಮಿನಾಡು ಭಾಗದಿಂದ ಮಂಗಳೂರು ಕಡೆಗೆ ತೆರಳುವ ಖಾಸಗಿ ಬಸ್ಸುಗಳು ರಸ್ತೆಯ ಮಧ್ಯದಲ್ಲೇ ಸಾಲುಗಟ್ಟಿ ನಿಲ್ಲುತ್ತಿವೆ. ಇದರಿಂದಾಗಿ ಬಲ ಭಾಗದಿಂದ ವೇಗವಾಗಿ ಬರುವ ಇತರ ವಾಹನಗಳ ಚಾಲಕರಿಗೆ ಸರಿಯಾಗಿ ಕಾಣಿಸುತ್ತಿಲ್ಲ. ಈ ಜಾಗದಲ್ಲಿ ಈಗಾಗಲೇ ಹಲವು ಬಾರಿ ಸಂಭವಿಸಬಹುದಾಗಿದ್ದ ದೊಡ್ಡ ಅಪಘಾತಗಳು ಕೂದಲೆಳೆಯ ಅಂತರದಲ್ಲಿ ತಪ್ಪಿ ಹೋಗಿವೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಬಸ್ಸು ಚಾಲಕರಿಗೆ ಈ ಬಗ್ಗೆ ಹಲವಾರು ಬಾರಿ ಮನವಿ ಮಾಡಿದರೂ, ಅವರು ಮಾತ್ರ ತಮ್ಮ ಹಳೆಯ ಚಾಳಿಯನ್ನು ಮುಂದುವರಿಸುತ್ತಿದ್ದಾರೆ. ಸಾರ್ವಜನಿಕರ ಜೀವದೊಂದಿಗೆ ಆಟವಾಡುತ್ತಿರುವ ಬಸ್ ಸಿಬ್ಬಂದಿಗಳ ನಡೆಗೆ ಸ್ಥಳೀಯರಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ತೂಮಿನಾಡು ವಾರ್ಡ್ ಸದಸ್ಯರಾದ ಇಲ್ಯಾಸ್ ತೂಮಿನಾಡು, “ನಾನು ವೈಯಕ್ತಿಕವಾಗಿ ಈ ಬಗ್ಗೆ ಹಲವು ಬಾರಿ ಬಸ್ಸು ಚಾಲಕರಲ್ಲಿ ವಿನಂತಿಸಿಕೊಂಡಿದ್ದೇನೆ. ಮಾತನಾಡಿದ ಸಂದರ್ಭದಲ್ಲಿ ಸರಿಪಡಿಸಿಕೊಳ್ಳುತ್ತೇವೆ ಎಂದು ಹೇಳುವವರು, ಬಳಿಕ ಮತ್ತೆ ಅದೇ ರೀತಿ ವರ್ತಿಸುತ್ತಿರುವುದು ವಿಷಾದನೀಯ. ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುವುದು,” ಎಂದು ತಿಳಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!