ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಕಳೆದ ಕೆಲ ದಿನಗಳಿಂದ ತಣ್ಣಗಾಗಿದ್ದ ಉದ್ವಿಗ್ನ ಪರಿಸ್ಥಿತಿ ಮತ್ತೆ ಭುಗಿಲೆದ್ದಿದ್ದು, ಯುನೈಟೆಡ್ ಅರಬ್ ಎಮಿರೇಟ್ಸ್ ಮೇಲೆ ಡ್ರೋನ್ ಹಾಗೂ ಕ್ಷಿಪಣಿ ದಾಳಿ ನಡೆಸಲಾಗಿದೆ. ಆದರೆ ಎಲ್ಲಾ ದಾಳಿಗಳನ್ನು ಸೇನೆ ಯಶಸ್ವಿಯಾಗಿ ತಡೆದಿರುವುದಾಗಿ ಯುಎಇ ಅಧಿಕಾರಿಗಳು ತಿಳಿಸಿದ್ದಾರೆ.
ಯುಎಇ ಕ್ಷಿಪಣಿ ಮತ್ತು ಡ್ರೋನ್ ದಾಳಿಯನ್ನು ಹಿಮ್ಮೆಟ್ಟಿಸಿರುವುದಾಗಿ ಘೋಷಿಸಿರುವ ಬೆನ್ನಲ್ಲೇ, ಇರಾನ್ ಹಾಗೂ ಅಮೆರಿಕ ನಡುವಿನ ಅಸ್ಥಿರ ಯುದ್ಧ ವಿರಾಮ ಮತ್ತಷ್ಟು ಒತ್ತಡಕ್ಕೆ ಒಳಗಾಗಿದೆ. ಇದೇ ವೇಳೆ, ಪರಿಸ್ಥಿತಿ ಉಲ್ಬಣಗೊಳಿಸುವ ಉದ್ದೇಶ ಅಮೆರಿಕ ಸೇನೆಗೆ ಇಲ್ಲ ಎಂದು ಅಮೆರಿಕ ಸ್ಪಷ್ಟಪಡಿಸಿದೆ.
ಅಮೆರಿಕ ತನ್ನ ಮೂರು ನೌಕಾಪಡೆಯ ಹಡಗುಗಳ ಮೇಲೆ ನಡೆದ ದಾಳಿಯನ್ನು ತಡೆದು, ಪ್ರತಿಯಾಗಿ ಇರಾನ್ ಸೈನಿಕ ನೆಲೆಗಳ ಮೇಲೆ ದಾಳಿ ನಡೆಸಿದ ಕೆಲವೇ ಗಂಟೆಗಳ ಬಳಿಕ ಯುಎಇ ಮೇಲೂ ಕ್ಷಿಪಣಿ ಹಾಗೂ ಡ್ರೋನ್ ದಾಳಿ ನಡೆದಿರುವುದಾಗಿ ವರದಿಯಾಗಿದೆ. ಇದರಿಂದ ಮಧ್ಯಪ್ರಾಚ್ಯದಲ್ಲಿ ಮತ್ತೆ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಇರಾನ್ ಮತ್ತು ಅಮೆರಿಕ ನಡುವಿನ ಯುದ್ಧ ವಿರಾಮ ಈಗಾಗಲೇ ಸೂಕ್ಷ್ಮ ಹಂತದಲ್ಲಿದ್ದು, ಎರಡೂ ದೇಶಗಳು ಯುದ್ಧ ಅಂತ್ಯಗೊಳಿಸುವ ಸಾಧ್ಯತೆಗಳ ಕುರಿತು ಪರೋಕ್ಷ ಮಾತುಕತೆ ನಡೆಸುತ್ತಿರುವ ಸಂದರ್ಭದಲ್ಲೇ ಈ ಬೆಳವಣಿಗೆ ನಡೆದಿದೆ.
ಗುರುವಾರ ಟೆಹ್ರಾನ್‌ನಲ್ಲಿ ಮಾತನಾಡಿದ ಎಸ್ಮಾಯಿಲ್ ಬಘೈ, ಯುದ್ಧ ಅಂತ್ಯಗೊಳಿಸುವ ಕುರಿತ ಅಮೆರಿಕದ ಹೊಸ ಪ್ರಸ್ತಾವನೆಗಳನ್ನು ಇರಾನ್ ಪರಿಶೀಲಿಸುತ್ತಿದೆ ಎಂದು ತಿಳಿಸಿದರು.
“ಶಾಂತಿ ಮಾತುಕತೆಗೆ ಮಧ್ಯಸ್ಥಿಕೆ ವಹಿಸುತ್ತಿರುವ ಪಾಕಿಸ್ತಾನ ನೀಡಿದ ಸಂದೇಶಗಳನ್ನು ನಾವು ಪರಿಶೀಲಿಸುತ್ತಿದ್ದೇವೆ. ಆದರೆ ಇನ್ನೂ ಯಾವುದೇ ಅಂತಿಮ ನಿರ್ಧಾರಕ್ಕೆ ಬಂದಿಲ್ಲ. ಅಮೆರಿಕಕ್ಕೆ ಯಾವುದೇ ಅಧಿಕೃತ ಉತ್ತರ ನೀಡಲಾಗಿಲ್ಲ” ಎಂದು ಅವರು ತಿಳಿಸಿದ್ದಾರೆ ಎಂದು ಇರಾನ್ ಸರ್ಕಾರಿ ಟಿವಿ ವರದಿ ಮಾಡಿದೆ.