ಆನ್‌ಲೈನ್ ಔಷಧ ಮಾರಾಟ ವಿರೋಧಿಸಿ ದೇಶವ್ಯಾಪಿ ಪ್ರತಿಭಟನೆ: ಕರ್ನಾಟಕದಲ್ಲಿ ಮಿಶ್ರ ಪ್ರತಿಕ್ರಿಯೆ

ಆನ್‌ಲೈನ್ ಮೂಲಕ ನಡೆಯುತ್ತಿರುವ ಔಷಧ ಮಾರಾಟ ವಿರೋಧಿಸಿ ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘ (AIOCD) ಕರೆ ನೀಡಿದ್ದ ದೇಶವ್ಯಾಪಿ ಮೆಡಿಕಲ್ ಶಾಪ್ ಬಂದ್‌ಗೆ ಕರ್ನಾಟಕದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ರಾಜ್ಯದ ಕೆಲವು ವ್ಯಾಪಾರ ಸಂಘಟನೆಗಳು ಸಂಪೂರ್ಣ ಬಂದ್‌ಗೆ ಬೆಂಬಲ ಸೂಚಿಸಿದರೆ, ಇನ್ನೂ ಕೆಲವು ಸಂಘಟನೆಗಳು ಕಪ್ಪುಪಟ್ಟಿ ಧರಿಸಿ ನೈತಿಕ ಬೆಂಬಲ ವ್ಯಕ್ತಪಡಿಸಿ ಅಂಗಡಿಗಳನ್ನು ತೆರೆಯುವ ನಿರ್ಧಾರ ಕೈಗೊಂಡಿವೆ. ರಾಜ್ಯದಲ್ಲಿ ಸುಮಾರು 26 ಸಾವಿರಕ್ಕೂ ಅಧಿಕ ಮೆಡಿಕಲ್ ಶಾಪ್‌ಗಳಿದ್ದು, ಬೆಂಗಳೂರಿನಲ್ಲಿ ಶೇಕಡಾ 90ರಷ್ಟು ಅಂಗಡಿಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ.

ಇನ್ನೊಂದೆಡೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತಿಭಟನೆಗೆ ಭಾರೀ ಬೆಂಬಲ ವ್ಯಕ್ತವಾಗಿದ್ದು, ಸುಮಾರು 1100ಕ್ಕೂ ಅಧಿಕ ಮೆಡಿಕಲ್ ಶಾಪ್‌ಗಳು ಬಂದ್ ಆಗಿವೆ. ಆದರೆ ಸಾರ್ವಜನಿಕರಿಗೆ ಔಷಧ ಕೊರತೆ ಉಂಟಾಗದಂತೆ 38 ಅಪೋಲೋ ಮೆಡಿಕಲ್ ಮಳಿಗೆಗಳು, 40 ಮೆಡ್ ಪ್ಲಸ್ ಶಾಪ್‌ಗಳು ಹಾಗೂ 130 ಪ್ರಧಾನ ಮಂತ್ರಿ ಜನಔಷಧಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.

ಆರೋಗ್ಯ ಇಲಾಖೆ ಕೂಡ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು, ತುರ್ತು ಅಗತ್ಯ ಇರುವ ರೋಗಿಗಳಿಗೆ ಔಷಧ ಲಭ್ಯವಾಗುವಂತೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದೆ.

ಜಿಎಸ್‌ಆರ್ 220(ಇ) ನಿಯಮವನ್ನು ಹಿಂಪಡೆಯಬೇಕು, ಅಕ್ರಮ ಇ-ಫಾರ್ಮಸಿಗಳನ್ನು ಬಂದ್ ಮಾಡಬೇಕು, ಅತಿಯಾದ ರಿಯಾಯಿತಿ ಮಾರಾಟದ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಸಣ್ಣ ಔಷಧ ವ್ಯಾಪಾರಿಗಳನ್ನು ರಕ್ಷಿಸಬೇಕು ಎಂದು ವ್ಯಾಪಾರಿಗಳು ಆಗ್ರಹಿಸಿದ್ದಾರೆ.

ಆನ್‌ಲೈನ್ ಔಷಧ ಮಾರಾಟದಿಂದ ನಕಲಿ ಪ್ರಿಸ್ಕ್ರಿಪ್ಷನ್ ಬಳಕೆ, ಆಂಟಿಬಯೋಟಿಕ್ ಹಾಗೂ ವ್ಯಸನಕಾರಿ ಔಷಧಿಗಳ ದುರುಪಯೋಗ, ರೋಗಿ ಮತ್ತು ಫಾರ್ಮಸಿಸ್ಟ್ ನಡುವಿನ ನೇರ ಸಂಪರ್ಕದ ಕೊರತೆ ಹಾಗೂ ಸರಿಯಾದ ಸಂಗ್ರಹಣೆಯಿಲ್ಲದ ಔಷಧಿಗಳ ಅಪಾಯ ಹೆಚ್ಚುತ್ತಿದೆ ಎಂದು ವ್ಯಾಪಾರಿಗಳು ಆರೋಪಿಸಿದ್ದಾರೆ.

ಬೃಹತ್ ಬೆಂಗಳೂರು ಔಷಧ ವ್ಯಾಪಾರಿಗಳ ಸಂಘ ಕೇವಲ ನೈತಿಕ ಬೆಂಬಲ ಸೂಚಿಸಿದ್ದು, “ರೋಗಿಗಳ ಸೇವೆಗೆ ತೊಂದರೆ ಆಗಬಾರದು” ಎಂಬ ಕಾರಣಕ್ಕೆ ಮೆಡಿಕಲ್ ಶಾಪ್‌ಗಳನ್ನು ತೆರೆಯಲಾಗಿದೆ ಎಂದು ಸಂಘದ ಅಧ್ಯಕ್ಷ ಎಂ.ಕೆ. ಮಾಯಣ್ಣ ತಿಳಿಸಿದ್ದಾರೆ.

ಎಐಒಸಿಡಿ ಅಧ್ಯಕ್ಷ ಜೆ.ಎಸ್. ಶಿಂಧೆ ಹಾಗೂ ಪ್ರಧಾನ ಕಾರ್ಯದರ್ಶಿ ರಾಜೀವ್ ಸಿಂಘಾಲ್ ನೇತೃತ್ವದಲ್ಲಿ ನಡೆಯುತ್ತಿರುವ ಈ ಪ್ರತಿಭಟನೆ ಕೇವಲ ವ್ಯಾಪಾರಿಗಳ ಹೋರಾಟವಲ್ಲ, ರೋಗಿಗಳ ಆರೋಗ್ಯ ಮತ್ತು ಸುರಕ್ಷತೆಯ ಪ್ರಶ್ನೆಯೂ ಹೌದು ಎಂದು ಸಂಘಟನೆಗಳು ಅಭಿಪ್ರಾಯಪಟ್ಟಿವೆ.

“ಔಷಧಿಗಳು ಸಾಮಾನ್ಯ ವಸ್ತುಗಳಲ್ಲ. ವೈದ್ಯರ ಸಲಹೆ ಹಾಗೂ ಅರ್ಹ ಫಾರ್ಮಸಿಸ್ಟ್ ಮಾರ್ಗದರ್ಶನದೊಂದಿಗೆ ಮಾತ್ರ ಬಳಸಬೇಕು. ಜನರು ಸ್ವಯಂ ಔಷಧ ಸೇವನೆ ತಪ್ಪಿಸಿ, ಅಧಿಕೃತ ಮತ್ತು ವಿಶ್ವಾಸಾರ್ಹ ವೇದಿಕೆಗಳಲ್ಲಿಯೇ ಔಷಧ ಖರೀದಿಸಬೇಕು” ಎಂದು ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!